ಮುಂಬೈ: ಸೋಮವಾರ ಕಾಂಗ್ರೆಸ್ ಪಕ್ಷದ 131ನೇ ಸಂಸ್ಥಾಪನಾ ದಿನ ಆಚರಿಸುತ್ತಿರುವ ಹೊತ್ತಿನಲ್ಲೇ ಪಕ್ಷದ ಮುಖವಾಣಿಯಲ್ಲಿ ಕಾಂಗ್ರೆಸ್ ಮತ್ತು ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಬಗ್ಗೆ ಟೀಕೆ ವ್ಯಕ್ತವಾಗಿದೆ.
ಕಾಂಗ್ರೆಸ್ ಪಕ್ಷದ ಮುಖವಾಣಿಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ನೆಹರೂ ನೀತಿಯನ್ನು ಟೀಕಿಸಲಾಗಿದೆ.
ಮಹಾರಾಷ್ಟ್ರದಿಂದ ಪ್ರಕಟಿಸಲ್ಪಡುವ ಕಾಂಗ್ರೆಸ್ ಪಕ್ಷದ ಮುಖವಾಣಿ ಕಾಂಗ್ರೆಸ್ ದರ್ಶನ್‌ನ ಡಿಸೆಂಬರ್ ಸಂಚಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ. ಈ ಲೇಖನದಲ್ಲಿ ಸೋನಿಯಾ ಗಾಂಧಿಯವರ ಅಪ್ಪ ಇಟೆಲಿಯ ಫ್ಯಾಸಿಸ್ಟ್ ಸೇನೆಯ ಸದಸ್ಯರಾಗಿದ್ದರು ಎಂದು ಹೇಳಲಾಗಿದೆ.
ಅಷ್ಟೇ ಅಲ್ಲ, ಸೋನಿಯಾ ಗಾಂಧಿ ಸರ್ಕಾರ ರಚಿಸಲು ವಿಫಲರಾದ ನಂತರ 62ನೇ ದಿನದಲ್ಲಿ ಅವರನ್ನು ಕಾಂಗ್ರೆಸ್ ಅಧ್ಯಕ್ಷೆಯನ್ನಾಗಿ ಮಾಡಲಾಯಿತು ಎಂದು ಈ ಲೇಖನದಲ್ಲಿ ಬರೆಯಲಾಗಿದೆ.
ಇದೇ ಸಂಚಿಕೆಯಲ್ಲಿ ಪ್ರಕಟವಾದ ಇನ್ನೊಂದು ಲೇಖನದಲ್ಲಿ ನೆಹರೂ ನೀತಿಯನ್ನು ಪ್ರಶ್ನಿಸಲಾಗಿದೆ. ಅಂದರೆ ಕಾಶ್ಮೀರದ ಸಮಸ್ಯೆ ಎದುರಾದಾಗ ನೆಹರೂ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮಾತನ್ನು ಕೇಳಿದ್ದರೆ, ಅದರ ಕಥೆಯೇ ಬೇರೆಯಾಗುತ್ತಿತ್ತು ಎಂದು ಹೇಳಲಾಗಿದೆ.
ಕಾಂಗ್ರೆಸ್ ಬಗ್ಗೆಯೇ ಟೀಕೆ ಮಾಡಿರುವ ಕಾಂಗ್ರೆಸ್ ಮುಖವಾಣಿ ವಿರುದ್ಧ ಕಾಂಗ್ರೆಸ್ಸಿಗರು ಗರಂ ಆಗಿದ್ದು, ಕಾಂಗ್ರೆಸ್ ದರ್ಶನ್‌ನ ಸಂಪಾದರ ಹಿರಿಯ ಕಾಂಗ್ರೆಸ್ ನೇತಾರ ಸಂಜಯ್ ನಿರುಪಮ್ ವಿರುದ್ಧ ಟೀಕಾ ಪ್ರಹಾರ ಶುರುವಾಗಿದೆ.
ಇತ್ತ ಸಂಜಯ್ ಅವರು ನಾನು ಪತ್ರಿಕೆಯ ದಿನ ನಿತ್ಯದ ಕಾರ್ಯಗಳ ಮೇಲೆ ನಿಗಾ ಇಟ್ಟಿಲ್ಲ ಎಂದಿದ್ದಾರೆ. ಅದೇ ವೇಳೆ ಈ ತಪ್ಪಿಗೆ ಕ್ಷಮೆಯಾಚಿಸಿದ ಅವರು, ಈ ಲೇಖನ ಬರೆದ ಸಂಪಾದಕೀಯ ತಂಡದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ದರ್ಶನ್‌ನಲ್ಲಿ ಪ್ರಕಟವಾದ ವಿಷಯಗಳು ಆಕ್ಷೇಪಾರ್ಹವಾಗಿವೆ. ಈ ರೀತಿಯ ತಪ್ಪುಗಳನ್ನು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಿರುಪಮ್ ಹೇಳಿದ್ದಾರೆ.
ಕಾಂಗ್ರೆಸ್ ದರ್ಶನ್ ಲೇಖನದ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ, ಪತ್ರಿಕೆಗೆ ಇಂಥಾ ಹಳೆಯ ವಿಷಯಗಳನ್ನು ಕೆದಕುವ ಅಗತ್ಯವಿರಲಿಲ್ಲ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹತ್ಯೆಯ ನಂತರ ಸೋನಿಯಾ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ಅವರ ನೇತೃತ್ವದಲ್ಲಿಯೇ ಮನಮೋಹನ್ ಸಿಂಗ್ ಸರ್ಕಾರ 10 ವರ್ಷಗಳ ಕಾಲ ಆಳ್ವಿಕೆ ನಡೆಸುವಂತಾಯಿತು ಎಂದಿದೆ.