ಪೇಶಾವರ: ಪೇಶಾವರದ ಮರ್ದಾನ್ ನಲ್ಲಿ ಆತ್ಮಾಹುತಿ ಬಾಂಬ್ ಸ್ಪೋಟಗೊಂಡಿದ್ದು, 26ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದಾಗಿ ಬುಧವಾರ ತಿಳಿದುಬಂದಿದೆ.
ವಾಯುವ್ಯ ಪ್ರಾಂತ್ಯ ಪೇಶಾವರದ ಮರ್ದಾನ್ ನಲ್ಲಿರುವ ರಾಷ್ಟ್ರೀಯ ಅಂಕಿಅಂಶಗಳು ಮತ್ತು ನೋಂದಣಿ ಪ್ರಾಧಿಕಾರ (ನಾದ್ರಾ) ಕಚೇರಿಯಲ್ಲಿ ಸ್ಫೋಟ ಸಂಭವಿಸಿದೆ. ಮೋಟಾರ್ ಬೈಕ್ ನಲ್ಲಿ ಬಂದ ದಾಳಿಕೋರರು ಕಚೇರಿ ಒಳಹೋಗಲು ಯತ್ನಿಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿಗಳು ದ್ವಾರದ ಹತ್ತಿರ ತಡೆದಿದ್ದಾರೆ. ಈ ವೇಳೆ ದಾಳಿಕೋರರು ನಿಂತಿದ್ದ ಸ್ಥಳದಲ್ಲಿಯೇ ಆತ್ಮಾಹುತಿ ಬಾಂಬ್ ಸ್ಪೋಟಿಸಿಕೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಬ್ ಸ್ಪೋಟಗೊಳ್ಳುತ್ತಿದ್ದಂತೆಯೇ ಸ್ಥಳದಲ್ಲಿದ್ದ 26 ಮಂದಿ ಸಾವನ್ನಪ್ಪಿದ್ದು, 32 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ರಕ್ಷಣಾ ದಳದ ಸಿಬ್ಬಂದಿಗಳು ಗಾಯಾಳುಗಳನ್ನು ರಕ್ಷಿಸಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಪೋಟದಿಂದಾಗಿ ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.