ನೊಯ್ಡಾ: ಸಂಸತ್ ಕಲಾಪಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್ ವಿರದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಹೊಸ ವರ್ಷದಲ್ಲಿ ಸುಗಮ ಕಲಾಪಕ್ಕೆ ಅವಕಾಶ ನೀಡುತ್ತೇವೆ ಎಂಬ ಸಂಕಲ್ಪ ಮಾಡಿ ಎಂದು ಕಾಂಗ್ರೆಸ್ ಗೆ ಸಲಹೆ ನೀಡಿದ್ದಾರೆ.
ನೊಯ್ಡಾದಲ್ಲಿ 14 ಪಥಗಳ ದೆಹಲಿ - ಮೀರತ್ ಎಕ್ಸ್ಪ್ರೆಸ್ ಮಾರ್ಗಕ್ಕೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ಮೋದಿ, 60 ವರ್ಷ ಕಾಲ ದೇಶವನ್ನು ಆಳಿದ ಕಾಂಗ್ರೆಸ್ಸಿಗರಿಗೆ ದೇಶದ ಕಾರ್ಯನಿರ್ವಹಣೆಯನ್ನು ಹಾಳು ಮಾಡುವ ಹಕ್ಕಿಲ್ಲ ಎಂದರು.
ರಾಷ್ಟ್ರದ ಅಭಿವೃದ್ಧಿಯಲ್ಲಿ ಅಡಚಣೆ ಉಂಟು ಮಾಡುವುದಿಲ್ಲ ಮತ್ತು ಸಂಸತ್ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತೇವೆ ಎಂದು ಹೊಸ ವರ್ಷದ ದಿನವಾದರೂ ಸಂಕಲ್ಪ ಮಾಡಿ ಎಂದು ಪ್ರಧಾನಿ ಪ್ರತಿಪಕ್ಷ ನಾಯಕರಿಗೆ ಸಲಹೆ ನೀಡಿದರು.
ದೆಹಲಿ - ಮೀರತ್ ಎಕ್ಸ್ಪ್ರೆಸ್ ರಾಷ್ಟ್ರೀಯ ಹೆದ್ದಾರಿ ಪಶ್ಚಿಮ ಉತ್ತರ ಪ್ರದೇಶದ ಅಭಿವೃದ್ಧಿಯ ಪ್ರಮುಖ ಅಂಶವಾಗಿ ಮೂಡಿ ಬರಲಿದೆ ಎಂದು ಮೋದಿ ಹೇಳಿದರು.
ಎಕ್ಸ್ ಪ್ರೆಸ್ ಹೈವೇ ನಿರ್ಮಾಣದಿಂದ ಪ್ರವಾಸೋದ್ಯಮ ಹಾಗೂ ಸಾವಿರಾರು ಉದ್ಯೋಗ ಸೃಷ್ಠಿಯಾಗಲಿದೆ. ದೆಹಲಿಯ ಉಪನಗರಗಳನ್ನು ಈ ಹೈವೇ ಸಂಪರ್ಕಿಸಲಿದೆ. ಹಳ್ಳಿ, ಹಳ್ಳಿಗಳ ನಡುವೆ ಉತ್ತಮ ಸಂಪರ್ಕ ರಸ್ತೆ ನಿರ್ಮಾಣವಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಗ್ರಾಮಗಳ ಜನ ಒಳ್ಳೆಯ ರಸ್ತೆಗಳಿಗಾಗಿ ಹಾತೊರೆಯುತ್ತಾರೆ. ಏಕೆಂದರೆ ಅದು ಅಭಿವೃದ್ಧಿಯ ಕೀಲಿಕೈ ಎಂಬುದು ಅವರಿಗೆ ಗೊತ್ತಿದೆ. ಅಭಿವೃದ್ಧಿಗೆ ಉತ್ತಮ ರಸ್ತೆಗಳ ಮೂಲಕ ಸಂಪರ್ಕ ಸಾಧಿಸುವ ವ್ಯವಸ್ಥೆ ಬೇಕು ಎಂಬುದು ಗ್ರಾಮಸ್ಥರಿಗೆ ಗೊತ್ತಿದೆ ಎಂದು ಪ್ರಧಾನಿ ನುಡಿದರು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಸುವರ್ಣ ಚತುಷ್ಪಥ ಯೋಜನೆ ಹಾಗೂ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗಳನ್ನು ಅಭಿವೃದ್ಧಿ ಸಲುವಾಗಿ ರೂಪಿಸಿದ್ದುದನ್ನೂ ಮೋದಿ ಸ್ಮರಿಸಿದರು.
7566 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು 14 ಪಥಗಳ 74 ಕಿಮೀ ಉದ್ಧದ ದೆಹಲಿ -ದಸ್ನಾ – ಮೀರತ್ ಎಕ್ಸ್ಪ್ರಸ್ ಮಾರ್ಗ ನಿರ್ಮಾಣ ಮತ್ತು ರಾಷ್ಟ್ರೀಯ ಹೆದ್ದಾರಿ 24ರಲ್ಲಿ ದಸ್ನಾ-ಹಾಪುರ್ ವಿಭಾಗದ ಮಾರ್ಗವನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿಯನ್ನೂ ಒಳಗೊಂಡಿದೆ.