ಢಾಕಾ: ರಾಜಕೀಯ ಹಿಂಸಾಚಾರಕ್ಕೆ ಬಾಂಗ್ಲಾದೇಶ ನಗುಗಿದ್ದು, ಪೂರ್ವ ಬಾಂಗ್ಲಾದಲ್ಲಿ ಮಂಗಳವಾರ ದುಷ್ಕರ್ಮಿಗಳು ಬಸೋಂದಕ್ಕೆ ಬೆಂಕಿ ಹಚ್ಚಿದ ಪರಿಣಾಮ 7 ಮಂದಿ ಸಜೀವ ದಹನಗೊಂಡಿದ್ದಾರೆ.
ಪೂರ್ವ ಬಾಂಗ್ಲಾದ ಕಾಕ್ಸ್ ಬಜಾರ್‌ನಲ್ಲಿ ರಾಜಧಾನಿ ಢಾಕಾದತ್ತ ತೆರಳುತ್ತಿದ್ದ ಬಸ್‌ನ ಮೇಲೆ ಬೆಳಗ್ಗೆ 3.30ರ ಸುಮಾರಿಗೆ ದೇಶದ ಮಾಜಿ ಪ್ರಧಾನಿ ಖಾಲಿದಾ ಜಿಯಾ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್‌ಪಿ)ಯ ಕಾರ್ಯಕರ್ತರೆನ್ನಲಾಗಿರುವ ದುಷ್ಕರ್ಮಿಗಳ ಗುಂಪೊಂದು ಪೆಟ್ರೋಲ್ ಬಾಂಬ್ ಎಸೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ದುಷ್ಕರ್ಮಿಗಳ ಈ ದುಷ್ಕೃತ್ಯಕ್ಕೆ ಬಸ್‌ನಲ್ಲಿದ್ದ ಏಳು ಪ್ರಯಾಣಿಕರು ಸಜೀವವಾಗಿ ದಹನಗೊಂಡಿದ್ದು, 16 ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಇಲ್ಲಿಗೆ ಸಮೀಪದ ಕಾಮಿಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ ಎಂದು ಆಸ್ಪತ್ರೆಯ ಮೂಲಗಳ ಮಾಹಿತಿಯನ್ವಯ ಹೆದ್ದಾರಿ ಪೊಲೀಸರು ತಿಳಿಸಿದರು.
ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರಗಳಲ್ಲಿ ಈವರೆಗೆ 54ಮಂದಿ ಸಾವನ್ನಪ್ಪಿದ್ದಾರೆ.