ನವದೆಹಲಿ: ಆಮ್ ಆದ್ಮಿ ಪಕ್ಷ ಹಾಗೂ ನರೇಂದ್ರ ಮೋದಿ ಭರವಸೆಗಳನ್ನು ನೀಡುತ್ತಾರೆಯೇ ಹೊರತು ಕೆಲಸ ಮಾಡುವುದಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯ ಜಹಾಂಗಿರ್‌ಪುರದಲ್ಲಿ ಬಹಿರಂಗ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು. ಕಳೆದ ದೆಹಲಿ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ಮತ ಹಾಕಿದಿರಿ. ಇದರಿಂದ ನಿಮ್ಮ ಜೀವನ ಶೈಲಿ ಬದಲಾಗಿದೆಯೇ ಎಂದು ಜನರನ್ನು ರಾಹುಲ್ ಪ್ರಶ್ನಿಸಿದರು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳನ್ನು ಟೀಕಿಸಿದ ರಾಹುಲ್ ಮೇಕ್ ಇನ್ ಇಂಡಿಯಾ ಜನರಿಗೆ ಯಾವುದೇ ರೀತಿಯ ಉದ್ಯೋಗ ನೀಡಿಲ್ಲ ಎಂದು ಹೇಳಿದರು.
ಅಧಿಕಾರಕ್ಕೆ ಬಂದರೆ ಹಣದುಬ್ಬರ ಕಡಿಮೆಯಾಗುತ್ತದೆ ಎಂದು ಬಿಜೆಪಿ ಮುಖಂಡರು ಹೇಳಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಯುಪಿಎ ಸರ್ಕಾರದ ಅಧಿಕಾರವಧಿಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ಲಾ ವಸ್ತುವಿನ ಬೆಲೆಯೂ ಹೆಚ್ಚಳವಾಯಿತು. ಇತ್ತೀಚೆಗಷ್ಟೇ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ. ಜನರಿಗೆ ದೊಡ್ಡ ದೊಡ್ಡ ಭರವಸೆಗಳನ್ನು ನೀಡಿದ ಪಕ್ಷ ತಾವು ನೀಡಿದ ಯಾವ ಭರವಸೆಗಳನ್ನು ಪರಿಪೂರ್ಣವಾಗಿ ನಿರ್ವಹಿಸಿಲ್ಲ. ನರೇಂದ್ರ ಮೋದಿ ಮತ್ತು ಕೇಜ್ರಿವಾಲ್ ಅವರಿಂದ ಮುಂದೆ ಏನನ್ನೂ ಪಡೆಯಲು ಸಾಧ್ಯವಿಲ್ಲ. ಈ ಇಬ್ಬರೂ ನಾಯಕರೂ ಹಿಂದು, ಮುಸ್ಲಿಂ ಎಂದು ಸಮುದಾಯಗಳಿಗಾಗಿ ಯುದ್ಧ ಮಾಡುತ್ತಾರೆ.
ಕಾಂಗ್ರೆಸ್ ಪಕ್ಷ ಕೌಮುಸೌಹಾರ್ದವನ್ನು ಬಯಸುತ್ತದೆ. ಕಾಂಗ್ರೆಸ್ ಗೆದ್ದರೆ. ದೆಹಲಿಯನ್ನು ಸಂಪೂರ್ಣವಾಗಿ ಬದಲಾಯಿಸುತ್ತೇವೆ. ದೆಹಲಿ ಬದಲಾವಣೆಯಲ್ಲಿ ಈಗಾಗಲೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಇನ್ನು ಸ್ವಲ್ಪ ದಿನಗಳಲ್ಲೇ ಕೈಗೊಂಡಿರುವ ಕೆಲಸಗಳು ಪೂರ್ಣಗೊಳ್ಳುತ್ತದೆ. ಎರಡು ವರ್ಷದೊಳಗೆ ಪ್ರತಿಯೊಬ್ಬರಿಗೂ ಸ್ವಂತ ಮನೆ ದೊರೆಯುವಂತೆ ಕಾಂಗ್ರೆಸ್ ಮಾಡುತ್ತದೆ ಎಂದು ರಾಹುಲ್ ಭರವಸೆ ನೀಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದ ಮಾಜಿ ಕೇಂದ್ರ ಸಚಿವೆ ಜಯಂತಿ ನಟರಾಜನ್ ಅವರ ಆರೋಪ ಕುರಿತು ಇದೇ ಮೊದಲ ಬಾರಿಗೆ ಮಾತನಾಡಿರುವ ರಾಹುಲ್, ಜಯಂತಿ ಅವರನ್ನು ಆದಿವಾಸಿಗಳ ಹಕ್ಕು ಹಾಗೂ ಪರಿಸರ ಸಂಕ್ಷಣೆಗಾಗಿ ಹೋರಾಟ ನಡೆಸುವಂತೆ ಹೇಳುತ್ತಿದ್ದೆ. ಆದರೆ ಅವರು ಯಾವ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂಬುದು ತಿಳಿದಿಲ್ಲ. ಅವರ ಆರೋಪಗಳಿಗೆ ನಾನು ಹೆದರುವುದಿಲ್ಲ ಎಂದು ಹೇಳಿದ್ದಾರೆ.