ದೇಶ

ಗೋಸ್ವಾಮಿ ವಜಾ, ಗೋಯಲ್ ನೂತನ ಗೃಹ ಕಾರ್ಯದರ್ಶಿ

Lingaraj Badiger

ನವದೆಹಲಿ: ಬಹುಕೋಟಿ ಶಾರದಾ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿ ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್ ಗೋಸ್ವಾಮಿ ಅವರನ್ನು ಕೇಂದ್ರ ಸರ್ಕಾರ ಬುಧವಾರ ರಾತ್ರಿ ವಜಾ ಮಾಡಿದೆ.

ಕೇಂದ್ರದ ಮಾಜಿ ಸಚಿವರೊಬ್ಬರ ಬಂಧನ ತಡೆಯಲು ಸಿಬಿಐ ಮೇಲೆ ಪ್ರಭಾವ ಬೀರಿದ ಆರೋಪದ ಹಿನ್ನೆಲೆಯಲ್ಲಿ ಗೋಸ್ವಾಮಿ ಅವರನ್ನು ವಜಾಗೊಳಿಸಲಾಗಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಎಲ್.ಸಿ. ಗೋಯಲ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಶಾರದಾ ಚಿಟ್ ಫಂಡ್ ಪ್ರಕರಣದಲ್ಲಿ ಇತ್ತೀಚಿಗಷ್ಟೇ ಬಂಧಿತರಾದ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಮಾತಂಗ್ ಸಿನ್ಹಾ ಪರ ಗೃಹ ಕಾರ್ಯದರ್ಶಿ ಗೋಸ್ವಾಮಿ ಸಿಬಿಐಗೆ ದೂರವಾಣಿ ಕರೆ ಮಾಡಿದ್ದರು. ಮಾತಂಗ್ ಬಂಧಿಸದಂತೆ ಸಿಬಿಐ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದರು.

ಈ ವಿಚಾರಕ್ಕೆ ಸಂಬಂಧಿಸಿ ಸ್ವತಃ ಸಿಬಿಐ ಮುಖ್ಯಸ್ಥರೇ ಪ್ರಧಾನಿ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ್ದರು. ಹಾಗಾಗಿ ಈ ಆರೋಪಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡುವಂತೆ ಗೋಸ್ವಾಮಿ ಅವರಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಸೂಚಿಸಿದ್ದರು. ಅದರಂತೆ ರಾಜನಾಥ್ ಅವರನ್ನು ಭೇಟಿಯಾದ ಗೋಸ್ವಾಮಿ ತಪ್ಪೊಪ್ಪಿಕೊಂಡಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಗೋಸ್ವಾಮಿ ಅವರಿಗೆ ರಾಜಿನಾಮೆ ಕೊಟ್ಟು ಮನೆಗೆ ತೆರಳುವಂತೆ ಪ್ರಧಾನಿ ಕಾರ್ಯಾಲಯದಿಂದ ಸೂಚನೆ ಬಂದಿದೆ ಎನ್ನಲಾಗಿದೆ.

ಈ ವರ್ಷದ ಮೂರನೇ ಪ್ರಕರಣ!
ಉನ್ನತ ಹುದ್ದೆಗಳಲ್ಲಿದ್ದ ಅಧಿಕಾರಿಗಳನ್ನು ಮನೆಗೆ ಕಳುಹಿಸಿದ ಮೂರನೇ ಪ್ರಕರಣ ಇದಾಗಿದೆ. ಕಳೆದ ತಿಂಗಳಷ್ಟೇ ಡಿಆರ್‌ಡಿಒ ಮುಖ್ಯಸ್ಥ ಅವಿನಾಶ್ ಚಂದರ್ ಅವರನ್ನು ದಿಢೀರ್ ಆಗಿ ಮನೆಗೆ ಕಳುಹಿಸಲಾಗಿತ್ತು. ವಾರದ ಹಿಂದೆ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಅವರಿಗೆ ನಿವೃತ್ತಿಗೆ ಏಳು ತಿಂಗಳು ಇದೆ ಎನ್ನುವಾಗಲೇ ರಾಜಿನಾಮೆ ನೀಡುವಂತೆ ಸೂಚಿಸಲಾಗಿತ್ತು.

SCROLL FOR NEXT