ಪಾಟ್ನಾ: ನಿತೀಶ್ ಕುಮಾರ್ ಅವರು ಬಿಹಾರ ವಿಧಾನಸಭೆಯ ಸದಸ್ಯರೇ ಅಲ್ಲ. ಹೀಗಾಗಿ ಅವರು ಮುಖ್ಯಮಂತ್ರಿಯಾಗಲು ಸಾಧ್ಯವೆ ಇಲ್ಲ ಎಂದು ಉಚ್ಚಾಟಿತ ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಸೋಮವಾರ ಹೇಳಿದ್ದಾರೆ.
ಎರಡನೇ ಬಾರಿ ಬಿಹಾರ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಂಝಿ, ನಾನು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸಿದ್ಧವಿದ್ದು, ಇದಕ್ಕಾಗಿ ಗೌಪ್ಯ ಮತದಾನ ನಡೆಯಲಿ ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ನಿತೀಶ್ ಕುಮಾರ್ ಅವರು ಜೆಡಿಯು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಗ್ಗೆ ಪ್ರತಿಕ್ರಿಯಿಸಿದ ಮಾಂಝಿ, ಜೆಡಿಯು ಶಾಸಕಾಂಗ ಪಕ್ಷ ನಾಯಕ ನಾನು, ನಾನು ಶಾಸಕಾಂಗ ಪಕ್ಷದ ಸಭೆ ಕರೆಯಬೇಕು. ಹೀಗಾಗಿ ಅವರು ಶಾಸಕಾಂಗ ಪಕ್ಷ ನಾಯಕರಾಗಿ ಆಯ್ಕೆಯಾಗಿರುವುದು ಅಸಂವಿಧಾನಿಕ ಎಂದು ಹೇಳಿದ್ದಾರೆ.
ನಿತೀಶ್ ಭೇಟಿಯ ಬೆನ್ನಲ್ಲೇ ಮತ್ತೊಮ್ಮೆ ರಾಜ್ಯಪಾಲರನ್ನು ಭೇಟಿ ಮಾಡಿದ ಮಾಂಝಿ, ನಾನು ಎಲ್ಲವನ್ನು ರಾಜ್ಯಪಾಲರಿಗೆ ವಿವರಿಸಿದ್ದು, ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಪಟ್ಟು ಬಿಡದ ಮಾಂಝಿ ತಾವು ಯಾವುದೇ ಕಾರಣಕ್ಕೂ ರಾಜಿನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ನಾನು ಬಹುಮತ ಸಾಬೀತುಪಡಿಸುವುದರಿಂದ ಓಡಿ ಹೋಗುತ್ತಿಲ್ಲ ಮತ್ತು ವಿಶ್ವಾಸ ಮತಯಾಚನೆ ವೇಳೆ ಗೌಪ್ಯ ಮತದಾನ ನಡೆಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.