ಪಾಟ್ನಾ: ಬಿಹಾರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರಿದಿದ್ದು, ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಸೋಮವಾರ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರನ್ನು ಭೇಟಿ ಮಾಡಿ, ಸರ್ಕಾರ ರಚನೆಯ ಪ್ರಸ್ತಾಪ ಮುಂದಿಟ್ಟಿದ್ದಾರೆ.
ನಿತೀಶ್ ಕುಮಾರ್ ಅವರು ಆರ್‌ಜೆಡಿ ಮತ್ತು ಕಾಂಗ್ರೆಸ್ ಸೇರಿದಂತೆ 130 ಶಾಸಕರೊಂದಿಗೆ ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದರು.
ರಾಜ್ಯಪಾಲರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ ಕುಮಾರ್, ಬಜೆಟ್ ಅಧಿವೇಶನ ಆರಂಭವಾಗುವ ಮುನ್ನವೇ ರಾಜ್ಯದಲ್ಲಿ ನೂತನ ಸರ್ಕಾರ ರಚನೆಯಾಗಬೇಕೆಂದು ರಾಜ್ಯಪಾಲರು ಹೇಳಿರುವುದಾಗಿ ತಿಳಿಸಿದರು.
ನಮಗೆ ಬಹುಮತ ಇದ್ದು, ಸರ್ಕಾರ ರಚಿಸಲು ಅವಕಾಶ ನೀಡಬೇಕು. 24 ಅಥವಾ 48 ಗಂಟೆಗಳಲ್ಲೇ ತಾವು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸಿದ್ಧ ಎಂದು ರಾಜ್ಯಾಪಾಲರಿಗೆ ತಿಳಿಸಿರುವುದಾಗಿ ನಿತೀಶ್ ಕುಮಾರ್ ಹೇಳಿದ್ದಾರೆ. ಅಲ್ಲದೆ ಒಂದು ವೇಳೆ ರಾಜ್ಯಪಾಲರು ತಮ್ಮ ಮನವಿಯನ್ನು ತಿರಸ್ಕರಿಸಿದರೆ ಶಾಸಕರೊಂದಿಗೆ ರಾಷ್ಟ್ರಪತಿ ಭವನದ ಮುಂದೆ ಪರೇಡ್ ನಡೆಸುವುದಾಗಿ ಹೇಳಿದ್ದಾರೆ.
ಇದೇ ವೇಳೆ ಪಕ್ಷದ ವಿರುದ್ಧವೇ ಬಂಡಾಯವೆದ್ದ್ದ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ವಿರುದ್ಧ ವಾಗ್ದಾಳಿ ನಡೆಸಿದ ನಿತೀಶ್, ಮಾಂಝಿ ಶಾಸಕರ ಕುದುರೆ ವ್ಯಾಪಾರ ನಡೆಸುತ್ತಿದ್ದು, ರಾಜ್ಯಪಾಲರು ಇದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.