ದೇಶ

ಆಪ್ ಶಾಸಕಾಂಗ ಪಕ್ಷದ ನಾಯಕರಾಗಿ ಕೇಜ್ರಿವಾಲ್ ಆಯ್ಕೆ

Srinivasamurthy VN

ನವದೆಹಲಿ: ಆಮ್ ಆದ್ಮಿ ಪಕ್ಷದ ಶಾಸಕಾಂಗ ನಾಯಕರಾಗಿ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಆಯ್ಕೆಯಾಗಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆಯ ಅಭೂತಪೂರ್ವ ಯಶಸ್ಸಿನ ಬಳಿಕ ಇಂದು ದೆಹಲಿಯ ಪಟೇಲ್ ನಗರದಲ್ಲಿರುವ ಆಪ್ ಕಚೇರಿಯಲ್ಲಿ ನಡೆದ ಮೊದಲ ಶಾಸಕಾಂಗ ಸಭೆಯಲ್ಲಿ ಅರವಿಂದ್ ಕೇಜ್ರಿವಾಲ್‌ರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಧ್ವನಿ ಮತದ ಮೂಲಕ ನಡೆದ ಮತದಾನದಲ್ಲಿ ಕೇಜ್ರಿವಾಲ್ ರನ್ನು ಆಪ್ ಪಕ್ಷದ ಶಾಸಕಾಂಗ ನಾಯಕರಾಗಿ ಆಯ್ಕೆ ಮಾಡಲಾಗಿದೆ.

ಇದಕ್ಕೂ ಮೊದಲು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶಾಸಕರನ್ನು ಅರವಿಂದ್ ಕೇಜ್ರಿವಾಲ್ ಅವರು ಅಭಿನಂದಿಸಿದರು. ಈ ನಡುವೆ ಶಾಸಕಾಂಗ ಸಭೆಯ ಬಳಿಕ ಸಂಜೆ ದೆಹಲಿ ರಾಜ್ಯಪಾಲ ನಜೀಬ್ ಜಂಗ್ ಅವರನ್ನು ಭೇಟಿ ಮಾಡಿದ ಕೇಜ್ರಿವಾಲ್ ಅವರು ಸರ್ಕಾರ ರಚನೆ ಕುರಿತಂತೆ ಹಕ್ಕು ಮಂಡಿಸಿದರು.

ಫೆಬ್ರವರಿ 14ರಂದು ಪ್ರಮಾಣ ವಚನ
ಇನ್ನು ಇದೇ ಫೆಬ್ರವರಿ 14ರಂದು ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೂಲಗಳ ಪ್ರಕಾರ ದೆಹಲಿ ರಾಮ್ ಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಲು ಉದ್ದೇಶಿಸಲಾಗಿದ್ದು, ಕಾರ್ಯಕ್ರಮದಲ್ಲಿ ಲಕ್ಷಾಂತರ ಆಪ್ ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ ಇದೆ.

ಮತ್ತೊಂದು ಪ್ರಮುಖ ವಿಚಾರವೆಂದರೆ ಕಳೆದ ಬಾರಿ ಅಂದರೆ 2014ರಲ್ಲಿ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದ ಕೇಜ್ರಿವಾಲ್ ಅವರು ಫೆಬ್ರವರಿ 14ರಂದು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇದೀಗ ಮತ್ತೆ ಅದೇ ದಿನದಂದೇ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.

ಇನ್ನು ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅರವಿಂದ್ ಕೇಜ್ರಿವಾಲ್ ಅವರು ಭೇಟಿಯಾಗುವ ಸಾಧ್ಯತೆ ಇದ್ದು, ಈ ವೇಳೆ ದೆಹಲಿ ಅಭಿವೃದ್ಧಿ ಯೋಜನೆಗಳ ಕುರಿತಂತೆ ಉಭಯ ನಾಯಕರು ಚರ್ಚಿಸುವ ಸಾಧ್ಯತೆ ಇದೆ. ಇದಲ್ಲದೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಭೇಟಿಗೂ ಅರವಿಂದ್ ಕೇಜ್ರಿವಾಲ್ ಸಮಯಾವಕಾಶ ಕೇಳಿದ್ದು, ದೆಹಲಿ ಭದ್ರತೆ ಕುರಿತಂತೆ ಚರ್ಚಿಸಲಿದ್ದಾರೆ. ಇಂದು ರಾತ್ರಿ 9.30ರ ವೇಳೆಗೆ ಕೇಜ್ರಿವಾಲ್ ಅವರ ಭೇಟಿಗೆ ಅನುಮತಿ ದೊರೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

SCROLL FOR NEXT