ಮೊಸುಲ್: ಇರಾಕ್ ನ ಮಾಜಿ ಸಂಸದೀಯ ಅಭ್ಯರ್ಥಿಯನ್ನು ಉಗ್ರ ಸಂಘಟನೆ ಇಸಿಸ್ ಸಾರ್ವಜನಿಕವಾಗಿ ಗುಂಡಿಟ್ಟು ಹತ್ಯೆ ಮಾಡಿದೆ.
ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ನ ಉಪಟಳ ಇರಾಕ್ ನಲ್ಲಿ ಮುಂದುವರೆದಿದ್ದು, ಇಂದು ಮೊಸುಲ್ ನಗರದಲ್ಲಿ ಸಾರ್ವಜನಿಕವಾಗಿಯೇ ಮಹಿಳೆಯೊಬ್ಬಳನ್ನು ಗುಂಡಿಟ್ಟು ಕೊಲ್ಲಲಾಗಿದೆ. ಮೂಲಗಳ ಪ್ರಕಾರ ಇಸಿಸ್ ಉಗ್ರರಿಂದ ಹತ್ಯೆಗೊಳಗಾದ ಮಹಿಳೆ ಕಳೆದ ವರ್ಷ ನಡೆದ ಇರಾಕ್ ಸಂಸದೀಯ ಚುನಾವಣೆಯ ಅಭ್ಯರ್ಥಿಯಾಗಿದ್ದರು ಎಂದು ತಿಳಿದುಬಂದಿದೆ.
ಮಹಿಳೆಯು ಇಸ್ಲಾಂ ಧರ್ಮ ಬೋಧನೆಗೆ ನಿರಾಕರಿಸಿದ್ದಲ್ಲದೇ ಇರಾಕ್ ಸರ್ಕಾರಕ್ಕೆ ಬೆಂಬಲ ನೀಡಿದ್ದರು ಎಂದು ಆರೋಪಿಸಿ ಉಗ್ರರು ಆಕೆಯನ್ನು ಅವರ ಮನೆಯಿಂದಲೇ ಅಪಹರಿಸಿ ಮೊಸುಲ್ ನಗರದ ಮಧ್ಯಭಾಗದಲ್ಲಿ ಗುಂಡಿಟ್ಟು ಕೊಂದಿದ್ದಾರೆ ಎಂದು ಹೆಸರು ತಿಳಿಯಲಿಚ್ಛಿಸದ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.
ಇಸಿಸ್ ನಿಷೇಧದ ನಡುವೆಯೂ ಕಳೆದ ವರ್ಷ ಇರಾಕ್ ಸಂಸದೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಲವಾರು ಸಂಸದೀಯ ಅಭ್ಯರ್ಥಿಗಳನ್ನು ಉಗ್ರರು ಹತ್ಯೆಗೈದಿದ್ದು, ಈ ಪೈಕಿ ಹಲವಾರು ಮಹಿಳೆಯರು ಕೂಡ ಸೇರಿದ್ದಾರೆ. ಪ್ರಸ್ತುತ ಹತ್ಯೆ ಇದಕ್ಕೆ ನೂತನ ಸೇರ್ಪಡೆ ಎಂದು ಸೇನಾಧಿಕಾರಿ ತಿಳಿಸಿದ್ದಾರೆ.