ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಅವರ ದೇವಾಲಯವನ್ನು ನಾವೇಕೆ ನಿರ್ಮಾಣ ಮಾಡಬಾರದು ಎಂದು ಉತ್ತರ ಪ್ರದೇಶದ ಸಚಿವ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೇವಾಲಯ ನಿರ್ಮಾಣ ಕುರಿತಂತೆ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅಜಂಖಾನ್, ಮುಲಾಯಂ ಸಿಂಗ್ ಯಾದವ್ ಅವರು ಕೂಡ ಹಿರಿಯ ಹಾಗೂ ಪ್ರಸಿದ್ಧ ನಾಯಕರಾಗಿದ್ದಾರೆ. ಅವರಿಗೆ ಸಾಕಷ್ಟು ಬೆಂಬಲಿಗರಿದ್ದು, ಅವರಿಗಾಗಿ ಏಕೆ ಒಂದು ದೇವಾಲಯ ನಿರ್ಮಾಣವಾಗಬಾರದು ಎಂದು ಪ್ರಶ್ನಿಸಿದ್ದಾರೆ.
ಮುಲಾಯಂ ಸಿಂಗ್ ದೇವಾಲಯ ನಿರ್ಮಾಣ ಪ್ರಸ್ತಾಪ ಕುರಿತ ಮನವಿಯನ್ನು ಪಕ್ಷದಲ್ಲಿಡುತ್ತೇನೆ. ಒಂದು ವೇಳೆ ನನ್ನ ಮನವಿಗೆ ಒಪ್ಪಿಗೆ ದೊರೆತರೆ ದೇವಾಲಯ ನಿರ್ಮಾಣದ ಕೆಲಸವನ್ನು ಪ್ರಾರಂಭಿಸುವೆ ಎಂದು ಅಜಂಖಾನ್ ಹೇಳಿದ್ದಾರೆ.
ಗುಜರಾತ್‌ನ ರಾಜ್‌ಕೋಟ್ ಸಮೀಪದ ಕೊಟಾರಿಯಾ ಗ್ರಾಮದ ಜನತೆ ತಮ್ಮ ನರೇಂದ್ರ ಮೋದಿ ಅವರ ಮೇಲಿನ ಪ್ರೀತಿಯಿಂದಾಗಿ ಜನರಿಂದ ದೇಣಿಗೆ ಸಂಗ್ರಹಿಸಿ ಅವರ ದೇವಾಲಯವನ್ನು ನಿರ್ಮಾಣ ಮಾಡಿದ್ದರು. ಈ ಸುದ್ದಿ ತಿಳಿದ ಪ್ರಧಾನಿ ಅವರು ಟ್ವಿಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಷ್ಟೇ ಅಲ್ಲದೇ ಅಭಿಮಾನಕ್ಕಾಗಿ ಒಬ್ಬ ವ್ಯಕ್ತಿಯ ದೇವಾಲಯವನ್ನು ಕಟ್ಟುವುದು ಭಾರತೀಯ ಸಂಸ್ಕೃತಿಗೆ ವಿರುದ್ಧವಾದದ್ದು. ಅಭಿಮಾನವನ್ನು ವ್ಯಕ್ತಪಡಿಸಲೇ ಬೇಕೆಂದಿದ್ದರೆ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಹೇಳಿದ್ದರು.