ಕೋಲ್ಕತಾ: ರಜಿಬ್ ದಾಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಬರಸತ್ ನ್ಯಾಯಲಯವು ಶುಕ್ರವಾರ ಶಿಕ್ಷೆ ಪ್ರಮಾಣವನ್ನು ಪ್ರಕಟಿಸುವ ಸಾಧ್ಯತೆಗಳಿವೆ.
2011ರ ಫೆ.14 ರಂದು ಬರಸತ್ ರೈಲ್ವೆ ನಿಲ್ದಾಣದ ಬಳಿ ಕೆಲಸ ಮಾಡುತ್ತಿದ್ದ ಯುವತಿ ಕೆಲಸ ಮುಗಿಸಿ ರಾತ್ರಿ 11.30ರ ಸುಮಾರಿಗೆ ತನ್ನ ಸಹೋದರ ರಜೀಬ್ ದಾಸ್ ನೊಂದಿಗೆ ಮನೆಗೆ ತೆರಳುತ್ತಿದ್ದಳು. ಈ ವೇಳೆ ನಿಲ್ದಾಣದ ಬಳಿ ಪಾನಮತ್ತರಾಗಿದ್ದ ಮೂವರು ರೌಡಿಗಳು ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಯುವತಿಯ ಸಹೋದರ ರಜೀಬ್ ದಾಸ್ ರೌಡಿಗಳೊಂದಿಗೆ ಜಗಳಕ್ಕಿಳಿದಿದ್ದನು. ಪಾನಮತ್ತರಾಗಿದ್ದ ರೌಡಿಗಳು ರಜೀಬ್ ದಾಸ್ ದೇಹಕ್ಕೆ ಸುಮಾರು 17 ಬಾರಿ ಇರಿದು ಕ್ರೂರವಾಗಿ ಕೊಲೆ ಮಾಡಿದ್ದರು.
ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ರೌಡಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆರೋಪಿಗಳಿಗೆ ಶಿಕ್ಷೆಯಾಗಲೇಬೇಕು ಎಂದು ಪಟ್ಟು ಹಿಡಿದಿದ್ದ ರಜಿಬ್ ದಾಸ್ ಅವರ ಅಕ್ಕ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು.
ಈ ಪ್ರಕರಣವನ್ನು ಬರಸತ್ ನ್ಯಾಯಾಲಯವು ಶುಕ್ರವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದ್ದು, ಆರೋಪಿಗಳಾದ ಬಿಸ್‌ವಂತ್ ಚಾಟರ್ಜಿ, ಮಿಥುನ್ ದಾಸ್, ಮನೋಜಿತ್ ಬಿಸ್ವಾಸ್ ಅವರ ವಿರುದ್ಧ ದಾಖಲಾಗಿರುವ 302 (ಕೊಲೆ), 34(ಉದ್ದೇಶ ಪೂರಕ ಕೃತ್ಯ), 354 (ಕ್ರಿಮಿನಲ್ ಹಾಗೂ ಲೈಂಗಿಕ ಕಿರುಕುಳ) ಪ್ರಕರಣದ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.