ದೇಶ

40 ಗಂಟೆ, 1,500 ಯೋಗಾಸನ

Mainashree

ಹಾಂಕಾಂಗ್: 40 ಗಂಟೆ, 1,500 ಆಸನ. ಸಿಂಗಾಪುರದಲ್ಲಿರುವ ಭಾರತದ ಯೋಗ ಶಿಕ್ಷಕ ಯೋಗರಾಜ್ ಸಿ.ಪಿ.(29) ಮಾಡಿದ ಹೊಸ ವಿಶ್ವದಾಖಲೆ ಇದು. ಶುಕ್ರವಾರ ಮಧ್ಯಾಹ್ನದ ಬಳಿಕ ಯೋಗರಾಜ್ ತಮ್ಮ ಸಾಹಸ ಆರಂಭಿಸಿ, ಭಾನುವಾರ ಮಧ್ಯಾಹ್ನ ಮುಕ್ತಾಯಗೊಳಿಸಿದರು.

ಪುರುಷರ ವಿಭಾಗದಲ್ಲಿ ಅತ್ಯಂತ ದೀರ್ಘ ಅವಧಿಗೆ ಯೋಗ ಮಾಡಿದ ಸಾಧಕ ಎಂದು ಗಿನ್ನೆಸ್ ದಾಖಲೆ ಸಂಸ್ಥೆಗಳ ಅಧಿಕಾರಿಗಳು ಪ್ರಮಾಣ ಪತ್ರ ನೀಡಿ ಗೌರವಿಸಿದರು.

ಈ ಬಗ್ಗೆ ವಿದೇಶಾಂಗ ಇಲಾಖೆ ವಕ್ತಾರ ಸಯ್ಯದ್ ಅಕ್ಬರುದ್ದೀನ್ ಟ್ವೀಟ್ ಮಾಡಿದ್ದಾರೆ. ಯೋಗರಾಜ್‍ಗೆ ಹಾಂಕಾಂಗ್‍ನಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗಳು ನೆರವು ನೀಡಿದ್ದಾರೆ. ಇದರ ಜತೆಗೆ ಭಾರತೀಯ ದೂತಾವಾಸ ಕಚೇರಿ ಅಧಿಕಾರಿಗಳೂ ಕೂಡ ಫೇಸ್‍ಬುಕ್‍ನಲ್ಲಿ ಈ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಫೋಟೋ ಅಪ್‍ಲೋಡ್ ಮಾಡಿದ್ದಾರೆ.

ಪ್ರಧಾನಿಗೆ ಅರ್ಪಣೆ: ತಮ್ಮ ಈ ಸಾಧನೆಯನ್ನು ಪ್ರಧಾನಿ ಮೋದಿಯವರಿಗೆ ಅರ್ಪಿಸುವುದಾಗಿ ಯೋಗರಾಜ್ ತಿಳಿಸಿದ್ದಾರೆ. ಎಳವೆಯಲ್ಲಿ ಸಾಧನೆ: ಐದು ವರ್ಷದವರಿದ್ದಾಗಲೇ ಯೋಗಾಭ್ಯಾಸ ಆರಂಭಿಸಿದ ಯೋಗರಾಜ್ 2003ರಲ್ಲಿ ಸಿಂಗಾಪುರಕ್ಕೆ ತೆರಳಿದ್ದರು.

ಹಲವು ದಾಖಲೆಗಳನ್ನು ನಿರ್ಮಿಸಿದ ಖ್ಯಾತಿ ಅವರಿಗಿದೆ. ಈ ಪೈಕಿ ಎರಡು ಗಂಟೆ ನಲವತ್ತು ನಿಮಿಷಗಳ ಕಾಲ ತಲೆಕೆಳಗೆ ಮಾಡಿ ನಿಂತಿದ್ದರು. 2011ರಲ್ಲಿ ಭಾರತದಲ್ಲಿ ಮೋಟರ್ ಬೈಕ್‍ನಲ್ಲಿ ಚಲಿಸುವ ವೇಳೆ 23ವಿವಿಧ ಆಸನಗಳನ್ನು ಪ್ರದರ್ಶಿಸಿದ್ದರು.

SCROLL FOR NEXT