ನವದೆಹಲಿ: ಕಳೆದ ಕೆಲವು ತಿಂಗಳಿನಿಂದ ಭಾರತದ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಜತೆಗೆ ಕಾಣಿಸಿಕೊಂಡು ಸುದ್ದಿಯಾಗುತ್ತಿದ್ದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ತಾನು ಹಾಗು ಕೊಹ್ಲಿ ಪ್ರೀತಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.
ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿರುವ ಅನುಷ್ಕಾ ಶರ್ಮಾ, ಕೊಹ್ಲಿ ಜತೆಗೆ ಡೇಟಿಂಗ್ ಮಾಡಲು ಯಾವತ್ತಿಗೂ ನಿರಾಕರಿಸಿಲ್ಲ ಎಂದು ತಿಳಿಸಿದ್ದಾರೆ.
ಕೊಹ್ಲಿ ಜತೆಗೆ ಪ್ರೇಮ ಸಂಬಂಧವನ್ನು ಹೊಂದಿದ್ದು, ನಮ್ಮ ಸಂಬಂಧವನ್ನು ಗೌರವಿಸುತ್ತೇನೆ. ಈ ಸಂಬಂಧದ ವ್ಯಾಪ್ತಿಯ ಬಗ್ಗೆ ಅರಿಯದಿರುವುದರಿಂದ ಈ ವಿಷಯದ ಕುರಿತು ಎಲ್ಲಿಯೂ ಚರ್ಚಿಸುವುದಿಲ್ಲ.
ಒಂದುವೇಳೆ ವ್ಯಕ್ತಿಯೊಬ್ಬನ ಜತೆ ಸಂಬಂಧ ಹೊಂದಿರುವ ಬಗ್ಗೆ ತಿಳಿಸಿದರೆ, ನಿರಂತರವಾಗಿ ಪ್ರಶ್ನೆಗಳು ಹುಟ್ಟುಕೊಳ್ಳುತ್ತವೆ. ಇದು ವೈಯಕ್ತಿಕ ವಿಷಯವಾಗಿರುವುದರಿಂದ ಅದನ್ನು ಗೌರವಿಸುವುದು ಉತ್ತಮ ಎಂದು ತಿಳಿಸಿದರು.
ಏನು ಮಾಡಬೇಕು ಅಥವಾ ಏನು ಮಾಡಬಾರದು ಎಂಬುದರ ಬಗ್ಗೆ ಸ್ಪಷ್ಟ ನಿರ್ಧಾರ ಹೊಂದಿದ್ದೇನೆ. ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸುವ ಸಲುವಾಗಿ ಈ ವಿಚಾರವನ್ನು ಚರ್ಚಿಸುವುದಿಲ್ಲ ಎಂದಿದ್ದಾರೆ.