ದೇಶ

ರು.250 ಕೋಟಿ ಕಪ್ಪು ಹಣ ಪತ್ತೆ

ನವದೆಹಲಿ: ಅಸ್ತಿತ್ವದಲ್ಲೇ ಇಲ್ಲದ ಕಂಪನಿಗಳ ಮೂಲಕ ತೆರಿಗೆ ವಂಚನೆ ಮಾಡುತ್ತಿದ್ದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಈ ಮೂಲಕ ರು. 250 ಕೋಟಿ ಕಪ್ಪು ಹಣವನ್ನು ಪತ್ತೆಹಚ್ಚಲಾಗಿದೆ.

ಎಂಟ್ರಿ ಆಪರೇಟರ್‍ಗಳ ಮೂಲಕ ಕಂಪನಿಗಳು ಸಾಕಷ್ಟು ಪ್ರಮಾಣದಲ್ಲಿ ತೆರಿಗೆ ವಂಚಿಸುತ್ತಿದ್ದವು. ಹಣಕಾಸು ಸಚಿವಾಲಯದ ಸೂಚನೆ ಮೇರೆಗೆ ಇಂಥ ಪ್ರಕರಣಗಳ
ಮೇಲೆ ನಿಗಾ ಇಟ್ಟಿದ್ದ ಕೇಂದ್ರ ಆರ್ಥಿಕ ಗುಪ್ತಚರ ಇಲಾಖೆ ಈ ವಂಚನೆಯನ್ನು ಪತ್ತೆ ಹಚ್ಚಿದೆ. ಈ ಆಪರೇಟರ್‍ಗಳು ಕಪ್ಪು ಹಣವನ್ನು ಬಿಳಿಯನ್ನಾಗಿ ಪರಿವರ್ತಿಸಿ ಕೊಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವನ್ನುಂಟು ಮಾಡುತ್ತಿದ್ದರು.

ಇವರು ಕಮಿಷನ್‍ಗೋಸ್ಕರ ತೆರಿಗೆ ಹಣ ತಪ್ಪಿಸಲು ಸಹಕರಿಸುತ್ತಿದ್ದರು. ಹೀಗೆ ವಂಚಿಸಲಾಗಿರುವ ಸುಮಾರು ರು. 249 ಕೋಟಿಯನ್ನು ಇದೀಗ ಪತ್ತೆ ಹಚ್ಚಲಾಗಿದ್ದು, ಇನ್ನಷ್ಟು ಪ್ರಕರಣಗಳ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಎಂಟ್ರಿ ಆಪರೇಟರ್‍ಗಳು ಮೊದಲು ಬೇನಾಮಿ ಕಂಪನಿಗಳ ಹೆಸರಿನಲ್ಲಿ ಕಪ್ಪು ಹಣವನ್ನು ತೋರಿಸುತ್ತಿದ್ದರು. ಬಳಿಕ ಬ್ಯಾಂಕ್ ವ್ಯವಹಾರಗಳನ್ನು ಮಾಡಿ ಚೆಕ್ ಮೂಲಕ ಇದನ್ನು `ಬಿಳಿ'ಯಾಗಿ ಪರಿವರ್ತಿಸುತ್ತಿದ್ದರು. ಕೇಂದ್ರ ಆರ್ಥಿಕ ಗುಪ್ತಚರ ಇಲಾಖೆ ಕಳೆದ ತಿಂಗಳು ನಡೆಸಿದ ಸಭೆಯಲ್ಲಿ ಈ ವಂಚನೆ ಜಾಲದ ಬಗ್ಗೆ ಚರ್ಚಿಸಿತ್ತು. ಈಚೆಗಷ್ಟೆ ಕೋಲ್ಕತ್ತಾದ ಒಂದು ಕಂಪನಿ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿತ್ತು.

SCROLL FOR NEXT