ನವದೆಹಲಿ: ಪಾಕಿಸ್ತಾನದ ಮೀನುಗಾರಿಕಾ ದೋಣಿಯನ್ನು ಸ್ಫೋಟಿಸಲು ತಾವು ಆದೇಶ ನೀಡಿಲ್ಲ ಎಂದು ಕರಾವಳಿ ಕಾವಲು ಪಡೆಯ ಡಿಐಜಿ ಬಿ.ಕೆ ಲೋಶಾಲಿ ಸ್ಪಷ್ಟನೆ ನೀಡಿದ್ದಾರೆ.
ಪಾಕ್ ಮೀನುಗಾರಿಕಾ ದೋಣಿಯನ್ನು ಸ್ಫೋಟಿಸಲು ಕರಾವಳಿ ಕಾವಲು ಪಡೆಯ ಡಿಐಜಿ ಬಿ.ಕೆ ಲೋಶಾಲಿ ಆದೇಶ ನೀಡಿದ್ದಾಗಿ ಬುಧವಾರ ಆಂಗ್ಲ ಪತ್ರಿಕೆಯೊಂದರಲ್ಲಿ ವರದಿ ಮಾಡಲಾಗಿತ್ತು.
ಈ ವರದಿಯನ್ನು ಅಲ್ಲಗೆಳೆದಿರುವ ಕರಾವಳಿ ಕಾವಲು ಪಡೆಯ ಡಿಐಜಿ ಬಿ.ಕೆ ಲೋಶಾಲಿ ಅವರು, ಇದು ಆಧಾರ ರಹಿತ ವರದಿಯಾಗಿದ್ದು, ಈ ಕುರಿತು ಸ್ಪಷ್ಟನೆ ನೀಡಿ ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
‘ದೋಣಿಯನ್ನು ಸ್ಫೋಟಿಸಿಬಿಡಿ, ಉಗ್ರರನ್ನು ವಶಕ್ಕೆ ಪಡೆದು ಅವರಿಗೆ ನಿತ್ಯ ಬಿರಿಯಾನಿ ಪೂರೈಸುವ ಕೆಲಸ ನಮಗೆ ಬೇಕಾಗಿಲ್ಲ’ ಎಂದು ಲೋಶಾಲಿ ಅವರು ಕರಾವಳಿ ಕಾವಲು ಪಡೆ ಸಿಬ್ಬಂದಿಗೆ ಸೂಚಿಸಿದ್ದರು.’ ಎಂದು ಆಂಗ್ಲ ಪತ್ರಿಕೆಯೊಂದರಲ್ಲಿ ವರದಿಯಾಗಿತ್ತು.
ಆದರೆ, ಇದಕ್ಕೆ ಸ್ಪಷ್ಟನೆ ನೀಡಿರುವ ಅವರು, ಇದು ಆಧಾರ ರಹಿತ ಎಂದಿದ್ದಾರೆ. ಪ್ರಕಟಣೆ ಮೂಲಕ ಇದಕ್ಕೆ ಪ್ರತ್ಯುತ್ತರವನ್ನೂ ನೀಡಿದ್ದಾರೆ.
ಡಿಸೆಂಬರ್ 31ರ ರಾತ್ರಿ ಸ್ಫೋಟಕಗಳಿಂದ ತುಂಬಿದ್ದ ಪಾಕಿಸ್ತಾನದ ಮೀನುಗಾರಿಕಾ ದೋಣಿಯೊಂದು ಗುಜರಾತ್ ಸಮುದ್ರ ವ್ಯಾಪ್ತಿಯಲ್ಲಿ ಭಾರತದ ಕರಾವಳಿ ಕಾವಲು ಪಡೆಯ ಕಣ್ಣಿಗೆ ಬಿದ್ದ ನಂತರ ಅನುಮಾನಾಸ್ಪದವಾಗಿ ಸ್ಫೋಟಗೊಂಡು, ಕೆಲವು ಗಂಟೆಗಳ ಕಾಲ ಹೊತ್ತಿ ಉರಿದು ನಾಶಗೊಂಡಿತ್ತು.
ಗುಪ್ತಚರ ವಿಭಾಗದ ಮಾಹಿತಿ ಆಧರಿಸಿ ಡಿ.೩೧ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದ ಕರಾವಳಿ ಕಾವಲು ಪಡೆ ಈ ದೋಣಿಯನ್ನು ಪತ್ತೆ ಮಾಡಿತ್ತು.