ಜಿನೇವಾ: ವಿಶ್ವಾದ್ಯಂತ ತೆರಿಗೆಗಳ್ಳರಿಗೆ ನೆರವು ನೀಡಿದ ಆರೋಪ ಎದುರಿಸುತ್ತಿರುವ ಎಚ್ಎಸ್ ಬಿಸಿ ಬ್ಯಾಂಕ್‍ನ ಜಿನೇವಾದಲ್ಲಿರುವ ಪ್ರಧಾನ ಕಚೇರಿ ಮೇಲೆ ಬುಧವಾರ ಸ್ವಿಜರ್ ಲೆಂಡ್ ಪೊಲೀಸರು ದಾಳಿ ನಡೆಸಿದ್ದಾರೆ.
ಪ್ರಮುಖ ದಾಖಲೆಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಪ್ಪು ಹಣ ವ್ಯವಹಾರಕ್ಕೆ ಸಂಬಂಧಿಸಿ ಕಣ್ಣಿಟ್ಟಿರುವ ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಗುಂಪು ಇತ್ತೀಚೆಗೆ ಎಚ್ಎಸ್ ಬಿಸಿಯ ಜಿನೇವಾ ಶಾಖೆಯಲ್ಲಿರುವ ಒಂದು ಲಕ್ಷ ಖಾತೆಗಳ ಪಟ್ಟಿ ಬಹಿರಂಗಪಡಿಸಿತ್ತು. ಈ ಪಟ್ಟಿಯಲ್ಲಿ ಭಾರತದ ಪ್ರಮುಖ ಉದ್ಯಮಿಗಳು, ರಾಜಕಾರಣಿಗಳು ಸೇರಿ 1,195 ಮಂದಿ ಹೆಸರೂ ಇತ್ತು.
ಈ ಪಟ್ಟಿ ಬಹಿರಂಗವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸ್ವಿಜರ್ ಲೆಂಡ್ ಸರ್ಕಾರ ಈ ಬ್ಯಾಂಕ್ ವಿರುದ್ಧ ತನಿಖೆಗೆ ಕೈಹಾಕಿದೆ. ಶಂಕಿತ ಅಕ್ರಮ ಹಣ ಸಾಗಣೆ ಆರೋಪದಡಿ ಎಚ್ಎಸ್ ಬಿಸಿ ಬ್ಯಾಂಕ್ ಮತ್ತು ಅಜ್ಞಾತ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ವಿಚಾರಣೆಯನ್ನೂ ಆರಂಭಿಸಲಾಗಿದೆ ಎಂದು ಪ್ರಕರಣದ ತನಿಖೆಯ ಭಾಗವಾಗಿರುವ ಸ್ವಿಜರ್ಲೆಂಡ್ ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬ್ಯಾಂಕ್ ಮೇಲೆ ಶ್ರೀಮಂತ ಗ್ರಾಹಕರಿಗೆ ತೆರಿಗೆ ತಪ್ಪಿಸಲು ನೆರವು ನೀಡಿದ ಆರೋಪ ಇದೆ. ಮುಂದಿನ ದಿನಗಳಲ್ಲಿ ತನಿಖೆಯನ್ನು ಬ್ಯಾಂಕ್ನಲ್ಲಿ ಹಣ ಇಟ್ಟಿರುವವರ ವಿರುದ್ಧ ವಿಸ್ತರಿಸುವ ಸುಳಿವನ್ನೂ ಅಲ್ಲಿನ ಸರ್ಕಾರ ನೀಡಿದೆ. ರು.7,414 ಶತಕೋಟಿ! ವಿಶ್ವದ 200 ದೇಶ-ಗಳ ಶ್ರೀಮಂತರಿಗೆ ತೆರಿಗೆ ತಪ್ಪಿಸಿ ರು7,414 ಶತಕೋಟಿ ಹಣ ಇಡಲು ನೆರವು ನೀಡಿದೆ ಎನ್ನುವ ಆರೋಪ ಎಚ್ಎಸ್ ಬಿಸಿ ಬ್ಯಾಂಕ್ ಮೇಲಿದೆ. ಹಣದ ವರ್ಗಾವಣೆ ಸಂಬಂಧಿಸಿ ಈ ಹಿಂದೆ ಆಗಿದ್ದ ತಪ್ಪನ್ನು ಬ್ಯಾಂಕ್ ಕೂಡ ಒಪ್ಪಿಕೊಂಡಿದೆ. ಇದಕ್ಕಾಗಿ ಭಾನುವಾರ ಸಾರ್ವಜನಿಕರ ಕ್ಷಮೆ ಕೋರಿ ಪತ್ರಿಕೆಗಳಲ್ಲಿ ಪೂರ್ಣಪುಟ ಜಾಹೀರಾತನ್ನೂ ನೀಡಿತ್ತು.
ಬ್ರಿಟನ್ ನಲ್ಲೂ ಕ್ರಮ
ತೆರಿಗೆಗಳ್ಳರಿಗೆ ನೆರವು ನೀಡಿದ ಆರೋಪದಲ್ಲಿ ಬ್ರಿಟನ್ ಸರ್ಕಾರ ಕೂಡ ಇತ್ತೀಚೆಗಷ್ಟೇ ಎಚ್ಎಸ್ ಬಿಸಿ ವಿರುದ್ಧ ಕ್ರಮ ಕೈಗೊಳ್ಳುವ ಸುಳಿವು ನೀಡಿತ್ತು. ಬ್ಯಾಂಕ್‍ನ ಅಧಿಕಾರಿಗಳನ್ನು ಕರೆಸಿ ವಿವರಣೆ ಕೇಳುವುದಾಗಿ ತಿಳಿಸಿತ್ತು.
ಭಾರತದಲ್ಲೂ ಕೇಸ್!
ಎಚ್ಎಸ್ ಬಿಸಿ ಬ್ಯಾಂಕ್ ನಲ್ಲಿ ಹಣ ಇಟ್ಟಿರುವ 1,668 ಭಾರತೀಯರಲ್ಲಿ ಕೇವಲ 1,195 ಮಂದಿ ವಿರುದ್ಧವಷ್ಟೇ ಕ್ರಮ ಕೈಗೊಳ್ಳಲು ಸಾಧ್ಯವಿದೆ. ಈ ಖಾತೆಗಳಲ್ಲಿ 2007ರವರೆಗೆ ಒಟ್ಟಾರೆ ರು25,420 ಕೋಟಿ ಹಣ ಇಡಲಾಗಿತ್ತು ಎಂದು ಹೇಳಲಾಗಿದೆ. ಏತನ್ಮಧ್ಯೆ, ಕಪ್ಪು ಹಣ ಇಡಲು ಬ್ಯಾಂಕ್ ಕೂಡ ನೆರವು ನೀಡಿದೆ ಎನ್ನುವ ಶಂಕೆ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಎರಡು ದಿನಗಳ ಹಿಂದಷ್ಟೇ ಎಚ್ಎಸ್ ಬಿಸಿ ವಿರುದ್ಧ ಪ್ರಕರಣ ದಾಖಲಿಸುವ ಇಂಗಿತ ವ್ಯಕ್ತಪಡಿಸಿತ್ತು. ಈ ಕ್ರಮಕ್ಕೆ ಕಪ್ಪು ಹಣಕ್ಕೆ ಸಂಬಂಧಿಸಿತನಿಖೆ ನಡೆಸುತ್ತಿರುವ ಎಸ್ಐಟಿಯ ಒಪ್ಪಿಗೆಯೂ ಸಿಕ್ಕಿದೆ.