ನವದೆಹಲಿ: ಕಾರ್ಪೊರೇಟ್ ಸಂಸ್ಥೆಗಳ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶನಿವಾರ ತಿಳಿಸಿದ್ದಾರೆ.
ಪ್ರಕರಣ ಕುರಿತು ದೆಹಲಿ ಪೊಲೀಸರು ಕೂಲಂಕುಶವಾಗಿ ತನಿಖೆ ಕೈಗೊಂಡಿದ್ದು, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ.
ರಹಸ್ಯ ದಾಖಲೆ ಕಳವು ಮತ್ತು ಬಜೆಟ್‌ಗೆ ಸೇರಲಿದ್ದ ಅನಿಲ ದರಕ್ಕೆ ಸಂಬಂಧಿಸಿದ ಪೂರಕ ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 12 ಆರೋಪಿಗಳನ್ನು ಬಂಧಿಸಿದ್ದಾರೆ.
ಅನೇಕ ಗೋಪ್ಯ ದಾಖಲೆಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿರುವ ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಈ ದಾಖಲೆಗಳ ಪ್ರತಿಗಳನ್ನು ಕೂಡ ಕಾರ್ಪೊರೇಟ್ ಕಂಪನಿಗಳು ಹಾಗೂ ಎನರ್ಜಿ ಕನ್ಸಲ್ಟೆಂಟ್‌ಗಳಿಗೆ ನೀಡಲಾಗುತ್ತಿತ್ತು ಎಂದು ಆರೋಪಿಗಳು ಬಾಯಿಬಿಟ್ಟಿದ್ದಾರೆ. ಆರೋಪಿಗಳಲ್ಲಿದ್ದ 3 ಡೈರಿಗಳಲ್ಲಿ ಕೆಲ ಪ್ರಮುಖ ದೂರವಾಣಿ ಸಂಖ್ಯೆಗಳು ಸಿಕ್ಕಿರುವುದಾಗಿ ಹೇಳಿದ್ದಾರೆ.
ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್, ಅನಿಲ್ ಅಂಬಾನಿ ಮಾಲೀಕತ್ವದ ಅನಿಲ್ ಧೀರೂಬಾಯಿ ಅಂಬಾನಿ ಗ್ರೂಪ್(ಎಡಿಎಜಿ), ಎಸ್ಸಾರ್ ಮತ್ತು ಕೇರ್ನ್ಸ್ ಕಂಪನಿಗಳ ಅಧಿಕಾರಿಗಳು ಮತ್ತು ಮಾಜಿ ಪತ್ರಕರ್ತ ಸಂತನು ಸೈಕಿಯಾ ಅವರು ಬಂಧಿತರಲ್ಲಿ ಸೇರಿದ್ದಾರೆ.