ನವದೆಹಲಿ: ಜೆರಾಕ್ಸ್ ಯಂತ್ರದ ಮೇಲೆ ಬಿದ್ದಿದ್ದ ಮಹತ್ವದ ಕಾಗದಪತ್ರ, ಕಚೇರಿಯ ಮುರಿದ ಬಾಗಿಲು...!
ಇವೆರಡು `ಕಾರ್ಪೋರೇಟ್ ಬೇಹುಗಾರಿಕೆ' ಎಂಬ ಅತಿದೊಡ್ಡ ಹಗರಣವನ್ನು ಬಯಲು ಮಾಡಿದ ಮಹತ್ವದ ಅಂಶಗಳು. ಪೆಟ್ರೋಲಿಯಂ ಸಚಿವಾಲಯದಲ್ಲಿ ನಡೆಯುತ್ತಿದ್ದ ಕಾರ್ಪೋರೇಟ್ ಬೇಹುಗಾರಿಕೆ ಬಗ್ಗೆ 8 ತಿಂಗಳ ಹಿಂದೆಯೇ ಸುಳಿವು ಸಿಕ್ಕಿದ್ದು ಹೀಗೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಒಂದು ದಿನ ಬೆಳಗ್ಗೆ ಸಚಿವಾಲಯದ ಕಚೇರಿಯೊಳಗಿರುವ ಛಾಯಾಪ್ರತಿ ಮುದ್ರಿಸುವ ಯಂತ್ರದ ಮೇಲೆ ಪ್ರಮುಖ ದಾಖಲೆಯೊಂದುಕಂಡುಬಂದಿದ್ತು.
ಈ ದಾಖಲೆ ಇಲ್ಲಿ ಹೇಗೆ ಬಂತು ಎಂಬ ಪ್ರಶ್ನೆ ಅಧಿಕಾರಿಗಳನ್ನು ಕಾಡತೊಡಗಿತು. ಇದೇ ವೇಳೆ, ನಿರ್ದೇಶಕರ ಕೊಠಡಿಯ ಬಾಗಿಲೊಂದು ಮುರಿದಿರುವುದು, ಯಾರೋ ಕಚೇರಿಯೊಳಗೆ ಪ್ರವೇಶಿಸಿದ್ದಾರೆ ಎಂಬ ಅನುಮಾನಕ್ಕೂ ಕಾರಣವಾಯಿತು. ಈ ಎಲ್ಲ ಸಂಶಯಗಳನ್ನು ಮುಂದಿಟ್ಟುಕೊಂಡು ತನಿಖೆ ನಡೆಸಿದಾಗ `ಕಾರ್ಪೋರೇಟ್ ಬೇಹು' ಹಗರಣ ಬೆಳಕಿಗೆ ಬಂದು, ಈಗ 12 ಮಂದಿಯ ಬಂಧನದವರೆಗೆ ತಲುಪಿದೆ.
ಹೆಚ್ಚಿನ ಭದ್ರತೆ: ವಿಶೇಷ ಕಾರ್ಯದರ್ಶಿ, ಇಬ್ಬರು ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರ ಕೊಠಡಿಗಳ ಕೀಗಳನ್ನೂ ನಕಲು ಮಾಡಲಾಗಿತ್ತು. ಒಟ್ಟಾರೆ ರಹಸ್ಯ ದಾಖಲೆಗಳೆಲ್ಲ ಕಾರ್ಪೋರೇಟ್ ಕಂಪನಿಗಳ, ಲಾಬಿದಾರರ ಕೈ ಸೇರುತ್ತಿತ್ತು. ಈ ಹಿನ್ನೆಲೆಯಲ್ಲಿ ಈಗ ಎಲ್ಲ ರಹಸ್ಯ ಫೈಲುಗಳನ್ನು ಕೈಯಲ್ಲೇ ವರ್ಗಾಯಿಸಬೇಕು ಅಥವಾ ಮುಚ್ಚಿದ ಲಕೋಟೆಯಲ್ಲೇ ಕಳುಹಿಸಬೇಕು ಎಂಬ ಆದೇಶ ಹೊರಬಿದ್ದಿದೆ. ಸಚಿವಾಲಯದ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.