ದೇಶ

ಭಾಗವತ್ ಹೇಳಿಕೆ ವಿವಾದ ಸಮರ್ಥನೆ, ಪ್ರತಿರೋಧಗಳ ವಾದ

ನವದೆಹಲಿ: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮದರ್ ಥೆರೇಸಾ ಬಗ್ಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದೆ.

`ಥೆರೇಸಾ ಅವರ ಸೇವೆಯ ಹಿಂದಿನ ಮೂಲ ಉದ್ದೇಶವೇ ಮತಾಂತರವಾಗಿತ್ತು' ಎಂಬ ಭಾಗವತ್ ಹೇಳಿಕೆಗೆ ಮಂಗಳವಾರ ಎಲ್ಲೆಡೆ ಪ್ರತಿರೋಧ ವ್ಯಕ್ತವಾಗಿದೆ. ಭಾಗವತ್ ಹೇಳಿಕೆಯನ್ನು ಆರೆಸ್ಸೆಸ್ ಸಮರ್ಥಿಸಿಕೊಂಡರೆ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಭಾಗವತ್ ವಿರುದಟಛಿ ಹರಿಹಾಯ್ದಿವೆ. ವಿವಾದಿತ ಹೇಳಿಕೆ ಬಗ್ಗೆ ಮಾತನಾಡಿದ ಆರೆಸ್ಸೆಸ್ ವಕ್ತಾರ ಎಂ.ಜಿ ವೈದ್ಯ, ಮಿಷನರಿಗಳ ಕೆಲಸವೇ ಅನುಮಾನಕ್ಕೆ ಕಾರಣವಾಗಿದೆ. ಅಂತಹ ಸಂಸ್ಥೆಗಳಿಗೆ ಹಲವು ಸಂಘಟನೆಗಳಿಂದ ಹಣ ಹರಿದು ಬರುತ್ತವೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ, ಸಂಘಪರಿವಾರ ಒಂದು ಹೇಳಿಕೆ ಕೊಟ್ಟರೆ, ಪ್ರಧಾನಿ ಮತ್ತೊಂದು ಹೇಳಿಕೆ ನೀಡುತ್ತಾರೆ. ಇದು ಜನರನ್ನು ಗೊಂದಲಕ್ಕೀಡುಮಾಡುವ ಯತ್ನ. ನೈಜ ವಿಚಾರಗಳನ್ನು ಮುಚ್ಚಿಟ್ಟು, ಸಮುದಾಯಗಳನ್ನು ಧ್ರುವೀಕರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ನಡುವೆ, ಭಾಗವತ್ ವಿವಾದದ ಬಗ್ಗೆ ಮಾತನಾಡಿರುವ ಮದರ್ ಥೆರೇಸಾ ಅವರ ಸೇವಾ ಸಂಸ್ಥೆ, ಭಾಗವತ್ ನಮ್ಮ ಸಂಸ್ಥೆಗೆ ಬಂದು ನಮ್ಮ ಕೆಲಸಗಳನ್ನು ನೋಡಲಿ. ನಮ್ಮ ಸಂಸ್ಥೆಯು ಧಾರ್ಮಿಕ ಹಿನ್ನೆಲೆಯನ್ನು ನೋಡದೆ ಎಲ್ಲ ಬಡವರಿಗೂ ನೆರವಾಗುತ್ತಿದೆ ಎಂದಿದೆ.

ಸದನದಲ್ಲೂ ಪ್ರಸ್ತಾಪ: ಥೆರೇಸಾ ಬಗೆಗಿನ ಮೋಹನ್ ಭಾಗವತ್ ಹೇಳಿಕೆ ಪ್ರಸ್ತಾಪಿಸುವ ಮೂಲಕ ಸದನದಲ್ಲಿ ಗದ್ದಲ ಎಬ್ಬಿಸಲು ಪ್ರತಿಪಕ್ಷಗಳು ನಡೆಸಿದ ಯತ್ನ ವಿಫಲವಾದವು. ಥೆರೇಸಾ ಬಗ್ಗೆ ಭಾಗವತ್ ಹೇಳಿಕೆಯನ್ನು ಜ್ಯೋತಿರಾದಿತ್ಯ ಸಿಂದ್ಯಾ ಅವರು ಪ್ರಸ್ತಾಪಿಸಿದಾಗ, ಈ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಗದು ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದರು. ಈ ಬಗ್ಗೆ ಚರ್ಚಿಸಲೆತ್ನಿಸಿದ ಮಲ್ಲಿಕಾರ್ಜುನ ಖರ್ಗೆ ಅವರ ಯತ್ನವೂ ವಿಫಲವಾಯಿತು.

SCROLL FOR NEXT