ಭೋಪಾಲ್: ವೃತ್ತಿಪರ ಪರೀಕ್ಷಾ ಮಂಡಳಿ ಹಗರಣ ಸಂಬಂಧ ಮಧ್ಯಪ್ರದೇಶದ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ರಾಜಿನಾಮೆ ನೀಡುವಂತೆ ರಾಮ್ ನರೇಶ್ ಯಾದವ್ ಅವರಿಗೆ ಬುಧವಾರ ಸೂಚಿಸಿದೆ.
ಭಾರತದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಪಾಲರೊಬ್ಬರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಾಗಿದೆ. ಮಧ್ಯಪ್ರದೇಶ ರಾಜ್ಯದ ವೃತ್ತಿಪರ ಶಿಕ್ಷಣ ಮಂಡಳಿಯಲ್ಲಿನ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಅಲ್ಲಿನ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರ ವಿರುದ್ಧ ವಿಶೇಷ ತನಿಖಾ ತಂಡದ ಪೊಲೀಸರು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದೂರು ದಾಖಲಿಸಿತ್ತು.
ಹಗರಣದಲ್ಲಿ ರಾಜ್ಯಪಾಲ ರಾಮ್ ನರೇಶ್ ಯಾದವ್ ಹೆಸರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಯಾದವ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಹಗರಣ ಕುರಿತಂತೆ ವಿವರಣೆ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ನಿನ್ನೆ ರಾಜ್ಯಪಾಲ ನರೇಶ್ ಯಾದವ್ ಅವರಿಗೆ ಸೂಚನೆ ನೀಡಿತ್ತು.
2014ರ ಡಿಸೆಂಬರ್ ನಲ್ಲಿ ಮಾಜಿ ತಾಂತ್ರಿಕ ಶಿಕ್ಷಣ ಸಚಿವ ಲಕ್ಷ್ಮಿಕಾಂತ್ ಶರ್ಮಾ ಸೇರಿದಂತೆ 129 ಮಂದಿ ವಿರುದ್ಧ ವಿಶೇಷ ತನಿಖಾ ತಂಡದ ಪೊಲೀಸರು ಗ್ರೇಡ್ 2 ಹಾಗೂ 3 ರ ಕಾಂಟ್ರಾಕ್ಟ್ ಬೇಸ್ಡ್ ಅಧ್ಯಾಪಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದರು. ಈ ವೇಳೆ ಮಧ್ಯಪ್ರದೇಶದ ರಾಜ್ಯಪಾಲರಾಗಿದ್ದ ರಾಮ್ ನರೇಶ್ ಯಾದವ್ ಅವರ ಹೆಸರೂ ಕೇಳಿಬಂದ ಹಿನ್ನೆಲೆಯಲ್ಲಿ ನಿನ್ನೆ ವಿಶೇಷ ತನಿಖಾ ತಂಡ ಎಫ್‌ಐಆರ್ ದಾಖಲು ಮಾಡಿದೆ.
ಹಗರಣದಲ್ಲಿ ರಾಜ್ಯಪಾಲರೇ ಭಾಗಿಯಾಗಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್, ನಿನ್ನೆ ನಡೆದ ಸಂಸತ್ ಕಲಾಪದ ವೇಳೆ ಹಗರಣದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ವಿಶೇಷ ತನಿಖಾ ತಂಡ ಪೊಲೀಸರು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಕೂಡಲೇ ಶಿವರಾಜ್ ಸಿಂಗ್ ಅವರು ಹಗರಣದಲ್ಲಿ ತಮ್ಮ ಪಾತ್ರ ಹಾಗೂ ರಾಜ್ಯಪಾಲರ ಪಾತ್ರದ ಕುರಿತಂತೆ ಸ್ಪಷ್ಟೀಕರಣ ನೀಡುವಂತೆ ಪಟ್ಟು ಹಿಡಿದಿದ್ದವು.