ನವದೆಹಲಿ: ಕಾರ್ಪೋರೇಟ್ ಕಂಪನಿಗಳು ತಮ್ಮ ಹಿತಾಸಕ್ತಿ ಸಾಧಿಸಲು ಸಚಿವರು, ಹಿರಿಯ ಅಧಿಕಾರಿಗಳಿಗೆ ನೀಡುವ `ವಿಶೇಷ ಸೇವೆ' ಕುರಿತು ಆಗಾಗ ಆಕ್ಷೇಪ ,ಆಕ್ರೋಶ ಕೇಳಿಬರುತ್ತಲೇ ಇರುತ್ತದೆ. ಎಸ್ಸಾರ್ ಗ್ರೂಪ್ ಕೂಡ ತನ್ನ ವ್ಯವಹಾರ ವಿಸ್ತರಣೆಗೆ ಇದೇ ರೀತಿಯ ವಿಶೇಷ ಸೇವೆ ನೀಡಿ ವಿವಾದ ಸೃಷ್ಟಿಸಿದೆ. ಕಂಪನಿಯ ಆತಿಥ್ಯ ಸ್ವೀಕರಿಸಿದವರ ಪಟ್ಟಿಯಲ್ಲಿ ಹಾಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೆಸರೂ ಇರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಆಂಗ್ಲ ದೈನಿಕ `ಇಂಡಿಯನ್ ಎಕ್ಸ್ಪ್ರೆಸ್' ಪತ್ರಿಕೆ ಈ ಸಂಬಂಧ ವರದಿ ಪ್ರಕಟಿಸಿದ್ದು, ಅದರಲ್ಲಿ ಗಡ್ಕರಿ ಮಾತ್ರವ ಲ್ಲದೆ ಅನೇಕ ಹಿರಿಯ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಪತ್ರಕರ್ತರೂ ವಿಶೇಷ ಆತಿಥ್ಯ ಹಾಗೂ ಉಡುಗೊರೆಯ ಫಲಾನುಭವಿಗಳು ಎಂದು ಹೇಳಿದೆ.
ಮಾಹಿತಿದಾರರೊಬ್ಬರಿಂದ ಬಹಿರಂಗಗೊಂಡ ಕಂಪನಿಯ ಅಧಿಕಾರಿಗಳ ಆಂತರಿಕ ಇಮೇಲ್ ಸಂವಹನಗಳ ಆಧಾರದ ಮೇಲೆ ಈ ರಹಸ್ಯ ಬಯಲಾಗಿದೆ. ಈ
ಇಮೇಲ್ನಲ್ಲಿ ಸರ್ಕಾರಿ ಅಧಿಕಾರಿಗಳ ಜತೆಗಿನ ಸಭೆ, ಸಚಿವರು, ಅಧಿ ಕಾರಿಗಳು ಹಾಗೂ ಪತ್ರಕರ್ತರಿಗೆ ಮಾಡಿಕೊಟ್ಟ ಅನುಕೂಲಗಳ ಕುರಿತ ವಿವರಗಳಿವೆ.ಗಡ್ಕರಿಗೆ ಏನು ಅನುಕೂಲ?: 2013ರಲ್ಲಿ ನಿತಿನ್ ಗಡ್ಕರಿ ಹಾಗೂ ಕುಟುಂಬಕ್ಕೆ ಸಂಸ್ಥೆಯ ಕ್ರೂಜ್(ಐಷಾರಾಮಿ ಹಡಗು)ನಲ್ಲಿ ಪ್ರವಾಸ ಕೈಗೊಳ್ಳಲು ಅವಕಾಶಮಾಡಿಕೊಡಲಾಗಿತ್ತು. ಫ್ರಾನ್ಸ್ನ ರಿವೀವೆರಾದ ರೆಸಾರ್ಟ್ ಪ್ರದೇಶದಲ್ಲಿ ತಂಗಿದ್ದ ಕ್ರೂಜ್ಗೆ ತೆರಳಲು ಹೆಲಿಕಾಪ್ಟರ್ ಸೌಲಭ್ಯವನ್ನೂ ಕಲ್ಪಿಸಲಾಗಿತ್ತು.200 ಹುದ್ದೆ ಮೀಸಲು: ಇಷ್ಟೇ ಅಲ್ಲ, ಕಂಪನಿ 200 ಹುದ್ದೆಗಳನ್ನು ವಿಐಪಿಗಳ ಶಿಫಾರಸಿಗಾಗಿಯೇ ಮೀಸಲಿಡುತ್ತಿದೆ. ಇದಕ್ಕಾಗಿ ಪ್ರತ್ಯೇಕ ಡಾಟಾ ಬ್ಯಾಂಕ್ ಅನ್ನು ಸ್ಥಾಪಿಸಲಾಗಿದೆ. ಮಾಜಿ ಸಚಿವ ಶ್ರೀಪ್ರಕಾಶ್ ಜೈಸ್ವಾಲ್, ಕಾಂಗ್ರೆಸ್ ಮುಖಂಡರಾದ ದಿಗ್ವಿಜಯ್ ಸಿಂಗ್, ಮೋತಿಲಾಲ್ ವೋರಾ, ಬಿಜೆಪಿ ಸಂಸದ ವರುಣ್ ಗಾಂಧಿ ಅವರೂ ನೌಕರಿಗಾಗಿ ಕಂಪನಿಗೆ ಶಿಫಾರಸು ಮಾಡಿದವರ ಪಟ್ಟಿಯಲ್ಲಿದ್ದಾರೆ.ಜೈಸ್ವಾಲ್ ಅವರು ಈ ರೀತಿ ಕೆಲವರನ್ನು ಶಿಫಾರಸು ಮಾಡಿದ್ದಾಗಿ ಖಚಿತಪಡಿಸಿದ್ದಾರೆ. ಕೆಲವರಿಗೆ ಶಿಫಾರಸುಮಾಡಿದ್ದೇನೆ. ನನ್ನ ಕ್ಷೇತ್ರದ ನಿರುದ್ಯೋಗಿಗಳ ಹೆಸರನ್ನು ಆಗಾಗ ನೌಕರಿಗಾಗಿ ಶಿಫಾರಸು ಮಾಡುತ್ತಿರುತ್ತೇನೆಎಂದಿದ್ದಾರೆ. ದಿಗ್ವಿಜಯ್ ಸಿಂಗ್ ಹಾಗೂ ವರುಣ್ ಗಾಂಧಿ ಕೂಡ ಈ ರೀತಿ ಯುವಕರ ಹೆಸರನ್ನು ನೌಕರಿ ಗಾಗಿ ಶಿಫಾರಸು ಮಾಡಿದ್ದಾಗಿ ತಿಳಿಸಿದ್ದಾರೆ.
ಗಡ್ಕರಿ ಏನಂತಾರೆ?
ಅದೊಂದು ಖಾಸಗಿ ಟ್ರಿಪ್. ನಾನು ಎಸ್ಸಾರ್ ಗ್ರೂಪ್ನ ರೂಯಿಯಾ ಕುಟುಂಬವನ್ನು 25 ವರ್ಷದಿಂದ ಬಲ್ಲೆ. ನಾನು ಯುರೋಪ್ ಪ್ರವಾಸ ಹೊರಟಿದ್ದನ್ನು ತಿಳಿದಾಗ ಅವರು ಕ್ರೂಜ್ಗೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು. ಇದರಲ್ಲಿ ತಪ್ಪೇನಿದೆ? ಇದು ಅವರ ಖಾಸಗಿ ಕ್ರೂಜ್. ಈ ಪ್ರವಾಸಕ್ಕೆ ಹೋಗುವಾಗ ನಾನು ಯಾವುದೇ ಹುದ್ದೆಯಲ್ಲಿರಲಿಲ್ಲ. ಕನಿಷ್ಠ ಸಂಸದನೂ ಆಗಿರಲಿಲ್ಲ. ಹಾಗಾಗಿ ಇಲ್ಲಿ ಹಿತಾಸಕ್ತಿಯ ಸಂಘರ್ಷದ ಮಾತೇ ಬರುವುದಿಲ್ಲ. ಸಚಿವನಾದ ಬಳಿಕ ಯಾವುದೇ ಕಂಪನಿ ಯಿಂದ ಅನುಕೂಲ ಪಡೆದಿಲ್ಲ. ಯಾವುದೇ ಕಂಪನಿಗೆ ಅನುಕೂಲವನ್ನೂ ಮಾಡಿಕೊಟ್ಟಿಲ್ಲ.