ದೇಶ

ಸಲ್ಮಾನ್‌ಖಾನ್ ನಿವಾಸದ ಮುಂದೆ ತಮಿಳಗರ ಬೃಹತ್ ಪ್ರತಿಭಟನೆ

Lakshmi R

ಮುಂಬೈ: ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಪರ ಮತ ಪ್ರಚಾರ ಮಾಡಿರುವುದನ್ನು ಖಂಡಿಸಿ, ಬಾಲಿವುಡ್‌ನಟ ಸಲ್ಮಾನ್ ಖಾನ್‌ನ ಮುಂಬೈ ನಿವಾಸದ ಮುಂದೆ ಇಂದು ಬೆಳಿಗ್ಗೆ ತಮಿಳುಪರ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದವು.

ಸಲ್ಮಾನ್‌ಖಾನ್ ಕೂಡಲೇ ಈ ಸಂಬಂಧ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿ, ಸಲ್ಮಾನ್‌ಖಾನ್ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಾ ನಿರತರನ್ನು ಪೈಕಿ ಸುಮಾರು 16 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಶ್ರೀಲಂಕಾದಲ್ಲಿ ಅಧ್ಯಕ್ಷ ಚುನಾವಣೆಗೆ ದಿನಗಣಗೆ ಆರಂಭವಾಗಿದ್ದು, ಮತದಾರರನ್ನು ಸೆಳೆಯಲು ಶ್ರೀಲಂಕಾ ಅಭ್ಯರ್ಥಿಗಳು ವಿಭಿನ್ನ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಸ್ತುತ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ, ಪುನಃ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಚುನಾವಣಾ ಪ್ರಚಾರಕ್ಕಾಗಿ ಹಾಲಿವುಡ್ ನಟ ಸಲ್ಮಾನ್‌ಖಾನ್ ಅವರನ್ನು ಬಳಸಿಕೊಂಡಿರುವುದು ಭಾರತೀಯ ತಮಿಳಗರನ್ನು ಕೆರಳಿಸಿದೆ.

ನಟ ಸಲ್ಮಾನ್ ಖಾನ್, ಶ್ರೀಲಂಕಾ ಮೂಲದ ಜಾಕ್ವಿಲಿನ್ ಫರ್ನಾಂಡೀಸ್ ಸೇರಿದಂತೆ ಐವರು ಬಾಲಿವುಡ್ ನಟರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಇದನ್ನು ಖಂಡಿಸಿ, ಸಲ್ಮಾನ್‌ಖಾನ್ ಅವರ ಮುಂಬೈ ನಿವಾಸದ ಮುಂದೆ ತಮಿಳು ಸಂಘಟನೆಗಳು ಜಮಾಯಿಸಿ, ಪ್ರತಿಭಟನೆ ನಡೆಸಿದವು.

ತಮಿಳರ ವಿರೋಧಿಯಾಗಿರುವ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಪರ ಸಲ್ಮಾನ್‌ಖಾನ್ ಪ್ರಚಾರ ಮಾಡಬಾರದು. ಅಲ್ಲದೆ ಈ ಸಂಬಂಧ ಕೂಡಲೇ ಸಲ್ಮಾನ್‌ಖಾನ್ ಕ್ಷಮೆಯಾಚಿಸಬೇಕು ಎಂದು ಅವರು ಪ್ರತಿಭಟನಿರತರು ಆಗ್ರಹಿಸಿದರು.

ಸಲ್ಮಾನ್‌ಖಾನ್ ವಿರುದ್ಧ ಡಿಎಂಕೆ ಹಾಗೂ ಎಂಡಿಎಂಕೆ ಪಕ್ಷಗಳು ಸಹಾ ತೀವ್ರ ವಿರೋಧ ವ್ಯಕ್ತಪಡಿಸಿವೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಎಂಡಿಎಂಕೆ ಅಧ್ಯಕ್ಷ ವೈಕೋ, ಭಾರತೀಯ ಮೀನುಗಾರರನ್ನು ಪದೇ ಪದೇ ಬಂಧಿಸುತ್ತಿರುವ ಶ್ರೀಲಂಕಾದ ಯಾವುದೇ ಪಕ್ಷದ ಪರ ಪ್ರಚಾರಕ್ಕೆ ಭಾರತೀಯರು ಬೆಂಬಲಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

SCROLL FOR NEXT