ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದ ಬಿಕ್ಕಟ್ಟು ಪರಿಹಾರ ನಿಟ್ಟಿನಲ್ಲಿ ಪಿಡಿಪಿಯಿಂದ ಮೈತ್ರಿಗೆ ಬಹಿರಂಗ ಆಹ್ವಾನ ಸಿಗುತ್ತಿದ್ದಂತೆ, ಬಿಜೆಪಿಯೊಳಗೆ ಸಮಾಲೋಚನಾ ಪ್ರಕ್ರಿಯೆ ಆರಂಭವಾಗಿದೆ.
ಈ ಸಂಬಂಧ ಬಿಜೆಪಿ ರಾಜ್ಯ ಘಟಕದ ಮುಖಂಡರು ದೆಹಲಿಯಲ್ಲಿ ಸೋಮವಾರ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ ಸುಮಾರು ಒಂದೂವರೆ ಗಂಟೆಗಳಷ್ಟು ಕಾಲ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿ ಹುದ್ದೆ, ಸಂವಿಧಾನದ 370ನೇ ಕಲಂ, ಸೇನಾಪಡೆಗಳ ವಿಶೇಷ ಅಧಿಕಾರದ ಕಾಯ್ದೆ ವಿಚಾರ ಮಾತುಕತೆ ವೇಳೆ ಪ್ರಸ್ತಾಪವಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಮಾಹಿತಿ ನೀಡಿದ್ದಾರೆ.
ಪಿಡಿಪಿ ಜತೆಗೆ ರಚನಾತ್ಮಕ ಮಾತುಕತೆ ಈಗಾಗಲೇ ಆರಂಭವಾಗಿದೆ ಎನ್ನುವ ವರದಿಯನ್ನು ತಳ್ಳಿಹಾಕಿರುವ ಅವರು, ಸದ್ಯ ಅನೌಪಚಾರಿಕ ಮಾತುಕತೆಯಷ್ಟೇ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಮಂಗಳವಾರದಿಂದ ಅಧಿಕೃತ ಮಾತುಕತೆ ಆರಂಭವಾಗುವ ಸಾಧ್ಯತೆ ಇದೆ.
ಬಿಜೆಪಿ ಮುಖ್ಯಮಂತ್ರಿ ಹುದ್ದೆಗಾಗಿ ಬೇಡಿಕೆ ಇಡುವ ಸಾಧ್ಯತೆ ದಟ್ಟವಾಗಿದೆ. ಜನರ ಒಲವು ಬಿಜೆಪಿ ಕಡೆಗಿದೆ ಎನ್ನುವುದನ್ನು ಮುಂದಿಟ್ಟುಕೊಂಡು ಬಿಜೆಪಿ ಈ ಬೇಡಿಕೆಯನ್ನು ಪಿಡಿಪಿ ಮುಂದಿಡಲಿದೆ. ಸಭೆಗೂ ಮುನ್ನ ಸುದ್ದಿಗಾರರ ಜತೆಗೆ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಜುಗಲ್ ಕಿಶೋರ್, ಸರ್ಕಾರ ರಚನೆಗೆ ಸಂಬಂಧಿಸಿ ಬಿಜೆಪಿ ಮುಂದೆ ಎಲ್ಲ ಅವಕಾಶ ಮುಕ್ತವಾಗಿದೆ. ಈ ಕುರಿತು ಅಂತಿಮ ನಿರ್ಧಾರವೊಂದನ್ನು ಶೀಘ್ರದಲ್ಲೇ ತೆಗೆದುಕೊಳ್ಳಲಾಗುವುದು. ಆಧರೆ, ಅಧಿಕಾರಕ್ಕೇರಲು ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ನಾವು ಬಿಜೆಪಿ ಜತೆಗೆ ವಿಷಾಯಾಧಾರಿತ ಒಪ್ಪಂದಕ್ಕೆ ಸಿದ್ಧವಾಗಿದ್ದೇವೆ. ಈ ವಿಚಾರಕ್ಕೆ ಸಂಬಂಧಿಸಿದ ನಿರ್ಧಾರ ಇನ್ನು ಬಿಜೆಪಿಯೇ ತೆಗೆದುಕೊಳ್ಳಬೇಕು.
-ನಯೀಮ್ ಅಖ್ತರ್, ಪಿಡಿಪಿ ವಕ್ತಾರ