ಬದೌನ್: ಪೊಲೀಸ್ ಠಾಣೆಯಲ್ಲೆ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಪೇದೆಯನ್ನು ಪೊಲೀಸರು ಮಂಗಳವಾರ ಬೆಳಿಗ್ಗೆ ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಪೊಲೀಸರು ರಾಯ್‌ಭರೇಲಿ ರೈಲ್ವೆ ನಿಲ್ದಾಣದಲ್ಲಿ ತಲೆಮರೆಸಿಕೊಂಡಿದ್ದ ಪೊಲೀಸ್ ಪೇದೆ ಅವಿನಾಶ್ ಯಾದವ್‌ನನ್ನು ಇಂದು ಬೆಳಿಗ್ಗೆ 1 ಗಂಟೆ ಸುಮಾರಿನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿ.31ರಂದು ಮನೆಯಿಂದ ಅಪಹರಣವಾಗಿದ್ದ 14 ಅಪ್ರಾಪ್ತ ಬಾಲಕಿಯನ್ನು ಪೇದೆಗಳಾದ ವೀರ್‌ಪಾಲ್‌ಸಿಂಗ್ ಯಾದವ್ ಮತ್ತು ಅವಿನಾಶ್ ಯಾದವ್ ಪೇದೆಗಳು ಅಪಹರಿಸಿ ಪೊಲೀಸ್ ಠಾಣೆಯಲ್ಲೇ ಅತ್ಯಾಚಾರ ಮಾಡಿದ್ದರು. ಸುದ್ದಿ ಬೆಳಕಿಗೆ ಬರುತ್ತಿದ್ದಂತೆ ಸರ್ಕಾರ ಇಬ್ಬರು ಪೇದೆಗಳನ್ನು ಅಮಾನತು ಮಾಡಿತು. ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ, ಆರೋಪಿಗಳು ತಲೆಮರೆಸಿಕೊಂಡಿದ್ದರು.
ಉತ್ತರ ಪ್ರದೇಶದ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಿತು. ಈ ವೇಳೆ ಆರೋಪಿ ಪೇದೆ ಅವಿನಾಶ್ ಯಾದವ್ ರಾಯ್‌ಭರೇಲಿ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಮತ್ತೊರ್ವ ಪೇದೆ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.