ದೇಶ

ಆಂಧ್ರ ಸರ್ಕಾರಿ ಬಸ್ ಪಲ್ಟಿ: 20 ಸಾವು, 30 ಜನರಿಗೆ ಗಂಭೀರ ಗಾಯ

Mainashree

ಅನಂತಪುರ: ಸರ್ಕಾರಿ ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲೇ 20 ಜನರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

60ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಸರ್ಕಾರಿ ಬಸ್ ಅನಂತಪುರ ಜಿಲ್ಲೆಯ ಮಡಕಶಿರ ಪ್ರದೇಶದಿಂದ ಪೆನುಕೊಂಡಗೆ ತೆರಳುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲೇ 10 ಪ್ರಯಾಣಿಕರು ಸಾವನ್ನಪ್ಪಿದ್ದರು. ನಂತರ ಸಾವಿನ ಸಂಖ್ಯೆ 20ಕ್ಕೆ ಏರಿದೆ ಎಂದು ಮೂಲಗಳು ತಿಳಿಸಿವೆ.

ಬಸ್‌ನಲ್ಲಿ ಬಹುತೇಕರು ವಿದ್ಯಾರ್ಥಿಗಳಿದ್ದು, 30ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಬೆಂಗಳೂರು ಆಸ್ಪತ್ರೆಗೆ ಕರೆದು ತರಲಾಗುತ್ತಿದ್ದು, ಸಣ್ಣ ಪುಟ್ಟವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ರಸ್ತೆ ಪಕ್ಕದಲ್ಲಿ ದೊಡ್ಡ ಕಂದಕವನ್ನು ತೋಡಿ ಹಾಗೆ ಬಿಡಲಾಗಿತ್ತು. ಕಿರಿದಾದ ರಸ್ತೆಯಲ್ಲಿ ಬಸ್ ಸಂಚರಿಸುತ್ತಿದ್ದ ವೇಳೆ ಆಯತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ ಎನ್ನಲಾಗಿದೆ.

ಉರುಳಿ ಬಿದ್ದಿದ್ದ ಬಸ್‌ನ್ನು ಸಿಬ್ಬಂದಿಗಳು ಮೇಲೆಕೆತ್ತಿದ್ದು, ಸ್ಥಳದಲ್ಲೇ ಸಾವನಪ್ಪಿದ್ದವರ ಮೃತದೇಹಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಮೃತಪಟ್ಟವರನ್ನು ಶೇಖರ್, ಲಕ್ಷ್ಮಿನಾರಾಯಣ, ಅಶಿಕ್ ಕುಮಾರ್, ಗಂಗಾಧರ, ನರೇಂದರ, ನರಸಿಂಹಾಮೂರ್ತಿ, ಹನುಮಂತರಾಯುಡು, ರಾಮಕೃಷ್ಣ, ಅನಿಲ್, ಅನಿತ, ಮುರುಳಿ, ಶ್ರೀನಿವಾಸುಲು ಎಂದು ಗುರುತಿಸಲಾಗಿದೆ. ಆಂಧ್ರ ಸರ್ಕಾರ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ್ದು, ತನಿಖೆ ಆದೇಶಿಸಿದೆ.


SCROLL FOR NEXT