ದೇಶ

ವಿನಾಕಾರಣ ನನ್ನ ಮೇಲೆ ದೋಷಾರೋಪ: ಶಶಿ ತರೂರ್

Rashmi Kasaragodu

ನವದೆಹಲಿ:  ಸುನಂದಾ ಪುಷ್ಕರ್ ಸಾವಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಅಧಿಕಾರಿಗಳು ನನ್ನ ಮೇಲೆ ವಿನಾಕಾರಣ ದೋಷಾರೋಪಣೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

ಸುನಂದಾ ಹತ್ಯೆಗೆ ಸಂಬಂಧಿಸಿದಂತೆ ನವೆಂಬರ್ 7ರಂದು ದೆಹಲಿ ಪೊಲೀಸ್ ಅಧಿಕಾರಿಗಳು ತರೂರ್ ಅವರ ಕೆಲಸದಾಳು ನಾರಾಯಣ್ ಸಿಂಗ್ ಅವರನ್ನು 16 ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ್ದರು. ಅನಂತರ ನವೆಂಬರ್ 8ನೇ ತಾರೀಖಿಗೆ 15 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.
ವಿಚಾರಣೆಗೊಳಪಡಿಸಿದ ಎರಡು ದಿನವೂ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ನಾರಾಯಣ್ ಸಿಂಗ್ ಮೇಲೆ ದೈಹಿಕ ಹಲ್ಲೆ ನಡೆಸಿದ್ದರು ಎಂದು ಶಶಿ ತರೂರ್ ದೂರಿದ್ದಾರೆ.

ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿ ಸುನಂದಾಳನ್ನು ನಾನು ಮತ್ತು ಕೆಲಸದಾಳು ನಾರಾಯಣ್ ಸೇರಿ ಹತ್ಯೆಗೈದಿದ್ದೇವೆ ಎಂದು ಒಪ್ಪಿಕೊಳ್ಳುವಂತೆ ನಾರಾಯಣ್ ಅವರನ್ನು ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ.

ಈ ಬಗ್ಗೆ ತಾನು ನವೆಂಬರ್ 8ನೇ ತಾರೀಖಿಗೆ ದೆಹಲಿ ಪೊಲೀಸ್ ಕಮಿಷನರ್ ಬಿಎಸ್ ಬಸ್ಸಿ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದೆ ಎಂದು ತರೂರ್ ಹೇಳಿದ್ದಾರೆ.

ಈ ರೀತಿ ಅಮಾಯಕ ವ್ಯಕ್ತಿಯೊಬ್ಬನ ಮೇಲೆ ದೈಹಿಕ ಹಲ್ಲೆ ನಡೆಸಿ ದೌರ್ಜನ್ಯವೆಸಗುವುದು ಕಾನೂನಿಗೆ ವಿರುದ್ಧವಾದುದು. ಈ ರೀತಿ ದೌರ್ಜನ್ಯವೆಸಗಿದ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳಬೇಕೆಂದು ನಾನು ವಿನಂತಿಸುತ್ತಿದ್ದೇನೆ ಎಂದು ಬಸ್ಸಿಯವರಿಗೆ ತರರ್ ಪತ್ರವನ್ನೂ ಬರೆದಿದ್ದಾರೆ.

ನಾನು ಹಾಗು ನನ್ನ ಸಹಚರರು ಯಾವುದೇ ವಿಚಾರಣೆ ಅಥವಾ ತನಿಖೆ ನಡೆಸುತ್ತಿದ್ದರೂ ಅದಕ್ಕೆ ಸಂಪೂರ್ಣ ಬೆಂಬಲವನ್ನು  ನೀಡಿದ್ದೇವೆ. ನನಗೆ ದೆಹಲಿ ಪೊಲೀಸರ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ತಕ್ಕ ಸಮಯದಲ್ಲಿ ತನಿಖೆ ಪೂರ್ಣಗೊಳ್ಳಲು ನಾನು ಸಹಕರಿಸುತ್ತೇನೆ ಎಂದು ತರೂರ್ ಭರವಸೆ ನೀಡಿದ್ದಾರೆ.

SCROLL FOR NEXT