ದೇಶ

60 ಗ್ರಾಮಗಳ ಗುರಿಯಾಗಿ ಇಟ್ಟುಕೊಂಡು ಪಾಕ್ ದಾಳಿ

Srinivasamurthy VN

ಇಸ್ಲಾಮಾಬಾದ್: ಗಡಿಯಲ್ಲಿ ಪಾಕಿಸ್ತಾನದ ಕ್ರೌರ್ಯ ಮುಂದುವರೆದಿದೆ. ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ ಪಾಕ್ ಸೇನೆ ಸೋಮವಾರ ರಾತ್ರಿಯಿಡೀ ಗುಂಡಿನ ದಾಳಿ ನಡೆಸಿವೆ. 60 ಗ್ರಾಮಗಳು ಹಾಗೂ ಹಲವಾರು ಗಡಿ ಠಾಣೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆದಿದ್ದು, ಗಜಿ ಗ್ರಾಮಗಳಲ್ಲಿ ಆತಂಕ ಮಡುಗಟ್ಟಿದೆ.

ಪಾಕಿಸ್ತಾನದ ಕಡೆಯಿಂದ ಬರುತ್ತಿರುವ ಶೆಲ್ಗಳು ಬಹಳ ದೂರದವರೆಗೆ ಚಿಮ್ಮುತ್ತಿದ್ದು, 10 ಸಾವಿರಕ್ಕೂ ಅಧಿಕ ಮಂದಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ. ಸೋಮವಾರ ರಾತ್ರಿ 11 ಗಂಟೆಗೆ ಪಾಕ್ ಸೇನೆ ಮತ್ತೆ ದಾಳಿ ಶುರುಮಾಡಿದ್ದು, ಮಂಗಳವಾರ ಬೆಳಗ್ಗೆ 7ರವರೆಗೂ ಗುಂಡಿನ ಚಕಮಕಿ ನಡೆಯಿತು. ಶೆಲ್ಗಳು ಭಾರತದ ಗಡಿಯಲ್ಲಿ ನಾಲ್ಕು ಕಿ.ಮೀ ದೂರದವರೆಗೂ ಬಿದ್ದಿದ್ದವು. ಗಡಿಗಿಂತ ತುಂಬಾ ದೂರದಲ್ಲಿರುವ ಶೆರ್ಪುರ, ಚಕ್ರಾ, ಲಚಿಪುರ್, ಮತ್ತು ಲಾಂಡಿ ಪ್ರದೇಶಗಳಲ್ಲೂ ಶೆಲ್ಗಳು ಕಂಡುಬಂದಿವೆ ಎಂದು ಕಥುವಾ ಡಿಸಿ ಇಕ್ಬಾಲ್ ಚೌದರಿ ತಿಳಿಸಿದ್ದಾರೆ.

10 ಸಾವಿರ ಗ್ರಾಮಸ್ಥರು ಸ್ಥಳಾಂತರ
ಪಾಕ್ ಕಡೆಯಿಂದ ಭಾರಿ ಶೆಲ್ ನಡೆಯುತ್ತಿರುವುದು ಸಾಂಬಾ ಮತ್ತು ಕಥುವಾ ಪ್ರದೇಶದ ಗ್ರಾಮಸ್ಥರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ನಿರಂತರ ದಾಳಿಗೆ ಹೆದರಿದ ಜನ ಕುಟುಂಬ ಸಮೇತ 10 ಸಾವಿರ ಮಂದಿ ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ.

ಪ್ರತಿಭಟನಾ ಟಿಪ್ಪಣಿ ಪಡೆಯಲು ಪಾಕ್ ನಕಾರ
ಪಾಕ್ ವಿರುದ್ಧ ಭಾರತವು ಪ್ರತಿಭಟನಾ ಟಿಪ್ಪಣಿ ಸಲ್ಲಿಸಲು ಮುಂದಾದರೂ ಪಾಕಿಸ್ತಾನಿ ರೇಂಜರ್ಗಳು ಅದನ್ನು ತಿರಸ್ಕರಿಸುವ ಮೂಲಕ ಉದ್ಧಟತನ ಮೆರೆದಿದ್ದಾರೆ. ಗಡಿಯಲ್ಲಿ ಶಾಂತಿ ಸ್ಥಾಪನೆಯಾಗಬೇಕು ಎನ್ನುವುದು ನಮ್ಮ ಉದ್ದೇಶ. ಆದರೆ ಪಾಕ್ ಸೇನೆ ಪದೇ ಪದೇ ಗುಂಡಿನ ದಾಳಿ ನಡೆಸುತ್ತಿದೆ. ಈ ಬಗ್ಗೆ ಪ್ರತಿಭಟನಾ ಟಿಪ್ಪಣಿ ನೀಡಿದರೆ ಪಾಕ್ ಅದನ್ನು ಸ್ವೀಕರಿಸುತ್ತಿಲ್ಲ. ಹೀಗಾಗಿ ಎರಡೂ ಕಡೆಯ ನಡುವೆ ಮಾತುಕತೆ ನಡೆಯುತ್ತಿಲ್ಲ ಎಂದಿದೆ ಬಿಎಸ್ಎಫ್.

ಗಡಿ ಪ್ರದೇಶಕ್ಕೆ ಬಿಎಸ್ಎಫ್ ಡಿಜಿ ಭೇಟಿ

ವಿರಾಮ ಉಲ್ಲಂಘನೆಯಿಂದಾಗಿ ಪರಿಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ಮಂಗಳವಾರ ಬಿಎಸ್ಎಫ್ ಪ್ರಧಾನ ನಿರ್ದೇಶಕ ಡಿಕೆ ಪಾಠಕ್ ಅವರು ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಜತಗೆ ಇಲ್ಲಿನ ರಕ್ಷಣಾ ಸನ್ನದ್ಧತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಕಳೆದ ಒಂದು ವಾರದಲ್ಲಿ ಪಾಕ್ ದಾಳಿಗೆ 4 ಯೋಧರು ಹುತಾತ್ಮರಾಗಿದ್ದಾರೆ.

SCROLL FOR NEXT