ಜಕಾರ್ತಾ: ಕಳೆದ ಡಿಸೆಂಬರ್ ಅಂತ್ಯದಲ್ಲಿ ದುರಂತಕ್ಕೀಡಾಗಿದ್ದ ಏರ್‌ಏಷ್ಯಾ ವಿಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ತಿರುವು ದೊರೆತಿದ್ದು, ವಿಮಾನದ ಬಾಲದ ಭಾಗ ಜಾವಾ ಸಮುದ್ರದಾಳದಲ್ಲಿ ಪತ್ತೆಯಾಗಿದೆ. ಇದೇ ವೇಳೆ ವಿಮಾನದ ಬ್ಲಾಕ್‌ಬಾಕ್ಸ್ ದೊರೆಯುವ ಕುರಿತು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಮಾನದ ಶೋಧ ಕಾರ್ಯಾಚರಣೆಗಾಗಿ ಇಂಡೋನೇಷ್ಯಾ ನಿಯೋಜಿಸಿರುವ ವಿಶೇಷ ಜಲಾಂತರ್ಗಾಮಿ ನೌಕೆ ಮತ್ತು ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವ ಮುಳುಗು ತಜ್ಞರು ಜಾವಾ ಸಮುದ್ರದಾಳದಲ್ಲಿ ವಿಮಾನದ ಅವಶೇಷವನ್ನು ಪತ್ತೆ ಹಚ್ಚಿದ್ದಾರೆ ಎಂದು ಶೋಧ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಹೆನ್ರಿ ಸೋಲಿಸ್ಟ್ಯೋ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಪ್ರಸ್ತುತ ಪತ್ತೆಯಾಗಿರುವ ವಿಮಾನದ ಅವಶೇಷದ ಕುರಿತು ಭಾರಿ ಕುತೂಹಲವೇರ್ಪಟ್ಟಿದೆ. ಏಕೆಂದರೆ ಸಾಮಾನ್ಯವಾಗಿ ವಿಮಾನದ ಸುರಕ್ಷತೆಗಾಗಿ ಅಳವಡಿಸಲಾಗುವ ಕಾಕ್‌ಪೀಟ್ ವಾಯ್ಸ್ ರೆಕಾರ್ಡರ್, ಫ್ಲೈಟ್ ಡಾಟಾ ರೆಕಾರ್ಡರ್, ಬ್ಲಾಕ್ ಬಾಕ್ಸ್ ನಂತಹ ಪ್ರಮುಖ ಯಂತ್ರೋಪಕರಣಗಳನ್ನು ವಿಮಾನದ ಬಾಲದಂತಹ ಭಾಗದಲ್ಲಿ ಅಳವಡಿಸಲಾಗಿರುತ್ತದೆ. ಹೀಗಾಗಿ ಅತ್ಯಂತ ಗಂಭೀರವಾಗಿ ಇದರ ಶೋಧ ಕಾರ್ಯ ನಡೆಸಲಾಗುತ್ತಿದ್ದು, ಜಾವಾ ಸಮುದ್ರದತ್ತ ನುರಿತ ತಜ್ಞರು ದೌಡಾಯಿಸಿದ್ದಾರೆ.
ಕಳೆದ ಡಿಸೆಂಬರ್ 28ರಂದು ಸುರಬಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿಂಗಾಪುರದತ್ತ ಟೇಕ್ ಆಫ್ ಆಗಿದ್ದ ಏರ್ ಏಷ್ಯಾ ಸಂಸ್ಥೆಯ 8501 ವಿಮಾನ ದಿಢೀರ್ ನಾಪತ್ತೆಯಾಗಿತ್ತು. ಬಳಿಕ ನಡೆದ ಶೋಧಕಾರ್ಯದಲ್ಲಿ ವಿಮಾನವು ದುರಂತಕ್ಕೀಡಾಗಿರುವುದು ತಿಳಿದುಬಂದಿತ್ತು.
ದುರಂತದಲ್ಲಿ ಸಿಬ್ಬಂದಿಗಳು ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 155 ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪೈಕಿ ಈ ವರೆಗೂ ನಡೆದ ಶೋಧ ಕಾರ್ಯದಲ್ಲಿ 40 ಮೃತ ದೇಹಗಳನ್ನು ಪತ್ತೆ ಹಚ್ಚಲಾಗಿದ್ದು, ಬಹುತೇಕ ಮೃತದೇಹಗಳನ್ನು ಸಂಬಂಧಿಕರಿಗೆ ರವಾನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.