ದೇಶ

ಶ್ರೀಲಂಕಾ ನೂತನ ಅಧ್ಯಕ್ಷರಾಗಿ ಮೈತ್ರಿಪಾಲ ಸಿರಿಸೇನಾ ಆಯ್ಕೆ

Lakshmi R

ಕೊಲಂಬೊ: ಶ್ರೀಲಂಕಾ ಅಧ್ಯಕ್ಷರಾಗಿ ಮೈತ್ರಿಪಾಲ ಸಿರಿಸೇನಾ ಆಯ್ಕೆಯಾಗಿದ್ದು, ಇಂದು ಸಂಜೆ ಲಂಕಾ ರಾಜಧಾನಿ ಕೊಲಂಬೋನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಪಕ್ಷಗಳ ಸಾಮಾನ್ಯ ಸ್ಪರ್ಧಿಯಾಗಿ ಮೈತ್ರಿಪಾಲ ಸಿರಿಸೇನಾ ಮುನ್ನಡೆ ಸಾಧಿಸಿದ್ದು, ಆಧ್ಯಕ್ಶ ಮಹೀಂದಾ ರಾಜಪಕ್ಸೆ ಪರಾಭವಗೊಂಡಿದ್ದಾರೆ. ಈ ಮೂಲಕ ೧೦ ವರ್ಷಗಳ ಮಹಿಂದಾ ಆಡಳಿತ ಮುಕ್ತಾಯಗೊಂಡಿದೆ.

ದಾಖಲೆಯ ಪ್ರಮಾಣದ ಮತದಾನ ನಡೆದಿದ್ದು, ತಮಿಳರ ಮತಗಳು ಅಧ್ಯಕ್ಷೀಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಿವೆ.

ಈ ಮಧ್ಯೆ ಚುನಾವಣೆಯ ಸೋಲೊಪ್ಪಿಕೊಂಡಿರುವ ರಾಜಪಕ್ಷೆ, ಪ್ರತಿಪಕ್ಷ ನಾಯಕ ರಣಿಲ್ ವಿಕ್ರಮಸಿಂಗೇ ಅವರನ್ನು ಭೇಟಿ ಮಾಡಿ, ನೂತನ ಅಧ್ಯಕ್ಷರಿಗೆ ತಮ್ಮ ಅಭಿನಂದನೆ ಸಲ್ಲಿಸುವಂತೆ ಮನವಿ ಮಾಡಿದ್ದಾರೆ. ಏಥೇನ್ ಮಧ್ಯೆ ಕೊಲೊಂಬೋನಲ್ಲಿರುವ ಅಧ್ಯಕ್ಷ ನಿವಾಸ ಟೆಂಪಲ್ ಟ್ರೀಯಿಂದ ಮಹೀಂದಾ ರಾಜಪಕ್ಸೆ ನಿರ್ಗಮಿಸಿದ್ದಾರೆ.

ಮತದಾರರ ನಿರ್ಧಾರವನ್ನು ಸ್ವಾಗತಿಸಿ, ಆಡಳಿತವನ್ನು ಶಾಂತಿಯುತವಾಗಿ ನಡೆಸಲು ನೂತನ ಅಧ್ಯಕ್ಷರಿಗೆ ಅಧಿಕಾರ ನೀಡುವುದಾಗಿ ರಾಜಪಕ್ಸೆ ತಿಳಿಸಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಒಟ್ಟು 19 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 69 ವರ್ಷದ ರಾಜಪಕ್ಸೆ ಹಾಗೂ 63 ವರ್ಷದ ಮೈತ್ರಿಪಾಲ ಸಿರಿಸೇನ ಮಾಧ್ಯೆ ತೀವ್ರ ಪೈಪೋಟಿ ನಡೆಯಿತು. 2005ರಿಂದ ಶ್ರೀಲಂಕಾ ಅಧ್ಯಕ್ಷರಾಗಿದ್ದ ರಾಜಪಕ್ಸೆ 3ನೇ ಬಾರಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದರು.

ಇಂದು ಸಂಜೆ ಕೊಲೊಂಬೊನಲ್ಲಿರುವ ಇಂಡಿಪೆಂಡೆನ್ಸ್ ಸ್ಕ್ವೇರ್‌ನಲ್ಲಿ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಮೈತ್ರಿಪಾಲ ಸಿರಿಸೇನಾ ಪ್ರಮಾಣವಚನ ಸ್ವೀಕರಿಸಿಲಿದ್ದಾರೆ ಎಂದು ಸಚಿವಾಲಯ ಮೂಲಗಳು ತಿಳಿಸಿವೆ.

ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೈತ್ರಿಪಾಲ ಸಿರಿಸೇನಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

SCROLL FOR NEXT