ನವದೆಹಲಿ: ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ತರೂರ್ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಪತ್ರಕರ್ತೆ ಮೆಹರ್ ತರಾರ್ ಅವರನ್ನು ದೆಹಲಿ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಮೆಹರ್ ವಿಚಾರಣೆಗಾಗಿ ಕೆಲವು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿರುವ ದೆಹಲಿ ಪೊಲೀಸರು, ಅದನ್ನು ಇಮೇಲ್ ಮೂಲಕ ಪಾಕ್ ಪತ್ರಕರ್ತೆಗೆ ರವಾನಿಸಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುನಂದಾ ಸಾವಿಗು ಮುನ್ನ ಶಶಿ ತರೂರ್ ಅವರನ್ನು ಭೇಟಿ ಮಾಡಿದ್ದ ಮೆಹರ್, ಸುನಂದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಯಾವುದೇ ಪ್ರಶ್ನೆಗೂ ತಾನು ಉತ್ತರಿಸಲು ಸಿದ್ಧ ಎಂದು ಈಗಾಗಲೇ ಸಾರ್ವಜನಿಕವಾಗಿಯೇ ಹೇಳಿದ್ದಾರೆ.
ಈ ಮಧ್ಯೆ, ಮೆಹರ್ ತರಾರ್ ತಮ್ಮ ವೈವಾಹಿಕ ಜೀವನದಲ್ಲಿ ಅಡ್ಡ ಬರುತ್ತಿದ್ದಾಳೆ ಎಂದು ಸುನಂದಾ ಪತಿ ತರೂರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು ಎಂದು ಶಶಿ ತರೂರ್ ಮನೆಗೆಲಸದಾಳು ನಾರಾಯಣ್ ಸಿಂಗ್ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಇದಲ್ಲದೆ, ಈ ಸಂಬಂಧ ಕೊಠಡಿಯಲ್ಲಿ ತರೂರ್ ಹಾಗೂ ಪುಷ್ಕರ್ ನಡುವೆ ಜಗಳವಾಗಿ ಹೊಡೆದಾಡಿಕೊಂಡಿದ್ದು, ಸುನಂದಾ ಹೊಡೆದ ಏಟಿಗೆ ತರೂರ್ ಕಾಲಿಗೆ ಪೆಟ್ಟಾಗಿತ್ತು ಎಂದೂ ನಾರಾಯಣ್ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ.