ಕೋಲ್ಕತಾ: ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿ ಬಾಂಬ್ ಸ್ಫೋಟ ಪ್ರಕರಣ ತಲ್ಲಣ ಮೂಡಿಸಿದ ಬೆನ್ನಲ್ಲೇ ಈಗ ಪಶ್ಟಿಮ ಬಂಗಾಳದ ಕೋಲ್ಕತಾದಲ್ಲಿ ಸ್ಫೋಟ ಸಂಭವಿಸಿದೆ.
ಶನಿವಾರ ಇಲ್ಲಿನ ಡಮ್ ಡಮ್ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡಿದೆ. ಘಟನೆಯಿಂದ ಇಬ್ಬರು ಗಾಯಗೊಂಡಿದ್ದಾರೆ. ಪ್ಲಾಟ್‌ಫಾರಂ ನಂ.2ರಲ್ಲಿ ಈ ಸ್ಫೋಟ ಸಂಭವಿಸಿದ್ದು, ಘಟನಾ ಸ್ಥಳದಲ್ಲಿ ಸರ್ಕ್ಯೂಟ್ ಹೊಂದಿರು ಟಿಫಿನ್ ಬಾಕ್ಸ್ ಪತ್ತೆಯಾಗಿದೆ. ಜತೆಗೆ, ಸ್ಫೋಟಕಗಳನ್ನು ಒಳಗೊಂಡಿರುವ ಕೆಲವೊಂದು ಕ್ಯಾನ್‌ಗಳೂ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ವರದಿಯ ಪ್ರಕಾರ, ಗೇಟ್ ನಂ.2ರಲ್ಲಿ ಚಿಂದಿ ಆಯುವ ಬಾಲಕರು ತ್ಯಾಜ್ಯವನ್ನು ಶೋಧಿಸುತ್ತಿದ್ದ ವೇಳೆ ಸ್ಫೋಟ ನಡೆದಿದೆ. ಇದೇ ವೇಳೆ, ಭದ್ರತಾ ಸಿಬ್ಬಂದಿಗೆ ಕಸದ ತೊಟ್ಟಿಯಲ್ಲಿ ಇನ್ನೂ ಮೂರು ಕಚ್ಚಾ ಬಾಂಬ್‌ಗಳು ಸಿಕ್ಕಿವೆ.
ಟಿಫಿನ್‌ನಲ್ಲಿಟ್ಟಿದ್ದ ಬಾಂಬ್ ಸ್ಫೋಟಗೊಂಡ ಪರಿಣಾಮ ಚಿಂದಿ ಆಯುತ್ತಿದ್ದ 11 ಮತ್ತು 13 ವರ್ಷದ ಇಬ್ಬರು ಬಾಲಕರು ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಕೋಲ್ಕತಾ ಸೇರಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿತ್ತು.