ನವದೆಹಲಿ: ಡಿಆರ್‌ಡಿಒ ಮುಖ್ಯಸ್ಥ ಅವಿನಾಶ್ ಚಂದರ್ ದಿಢೀರ್ ವಜಾ ಕ್ರಮವನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.
ಹುದ್ದೆಯನ್ನು ಯುವ ವಿಜ್ಞಾನಿಗೆ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ತಿಳಿಸಿದ್ದಾರೆ. ಆದರೆ ಕೇಂದ್ರ ಕ್ರಮವನ್ನು ಕಾಂಗ್ರೆಸ್ ಖಂಡಿಸಿದೆ. ಇದೇ ವೇಳೆ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಅವಿನಾಶ್ ನಿರಾಕರಿಸಿದ್ದಾರೆ.
ಗುತ್ತಿಗೆಯಲ್ಲಿರುವವರು ಬೇಡ
ಇಂತಹುದೊಂದು ಉನ್ನತ ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ನೀಡುವುದು ಸರಿಯಲ್ಲ. ವಿಜ್ಞಾನ ಕ್ಷೇತ್ರದ ಯುವ ತಲೆಮಾರಿಗೆ ಅವಕಾಶ ನೀಡೋಣ ಎಂದು ನಾನೇ ಶಿಫಾರಸು ಮಾಡಿದ್ದೆ ಎಂದು ಪರ್ರಿಕರ್ ನುಡಿದಿದ್ದಾರೆ. ಮಂಗಳವಾರವಷ್ಟೇ ಪ್ರಧಾನಿ ಮೋದಿ ನೇತೃತ್ವದ ಸಂಪುಟದ ನೇಮಕ ಸಮಿತಿ ಜ.31ರಿಂದ ಅನ್ವಯವಾಗುವಂತೆ ಅವಿನಾಶ್ ಚಂದರ್ ಅವರ ಗುತ್ತಿಗೆಯನ್ನು ರದ್ದು ಮಾಡಿತ್ತು. ಕಳೆದ ನ.30ರಂದು ಅವರು ನಿವೃತ್ತಿ ಹೊಂದಿದ್ದರು. ನಂತರ ಅವರಿಗೆ ಮೇ 31ರವರಗೆ ಅಂದರೆ 18 ತಿಂಗಳ ಕಾಲ ಗುತ್ತಿಗೆ ಆಧಾರದಲ್ಲಿ ಈ ಹುದ್ದೆಯನ್ನು ಮುಂದುವರಿಸುವಂತೆ ಸೂಚಿಸಲಾಗಿತ್ತು.