ನವದೆಹಲಿ: ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಾಂಡೇಯ ಕಾಟ್ಜು, ಬಾಲಿವುಡ್ ನಟಿ ಕತ್ರಿನಾ ಕೈಫ್ ಭಾರತದ ಮುಂದಿನ ರಾಷ್ಟ್ರಪತಿಯಾಗಲಿ ಎಂಬ ವಿವಾದದ ಹೇಳಿಕೆ ನೀಡಿರುವುದರ ಕುರಿತು ಇಂದು ಕ್ಷಮೆ ಯಾಚಿಸಿದ್ದಾರೆ.
ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿರುವ ಕಾಟ್ಜು, ನೆನ್ನೆ ತಮ್ಮ ಬ್ಲಾಗ್‌ನಲ್ಲಿ ಕತ್ರಿನಾ ಕೈಫ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದರು. ಸುಂದರ ಮಹಿಳೆಯರು ಚುನಾವಣೆಯಲ್ಲಿ ನಿಂತು ಆಯ್ಕೆಯಾಗುವುದನ್ನು ಯಾವಾಗಲೂ ಬೆಂಬಲಿಸುತ್ತೇನೆ.
ವಿಶೇಷವಾಗಿ ನಟಿಯರು ಆಯ್ಕೆಯಾಗಬೇಕು. ಅವರು ಅಂದವಾಗಿರುತ್ತಾರಲ್ಲ ಅದಕ್ಕೆ. ಏಕೆಂದರೆ ಜನಪ್ರತಿನಿಧಿಗಳು ಚುನಾವಣೆ ಪ್ರಚಾರದ ವೇಳೆ ಎಲ್ಲದರ ಬಗ್ಗೆಯೂ ಭರವಸೆ ನೀಡುತ್ತಾರೆ. ನಂತರ ಅದನ್ನು ಮರೆತು ಬಿಡುತ್ತಾರೆ.
ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ನೀವು ಯಾರದರೊಬ್ಬರನ್ನು ಆರಿಸಲೇಬೇಕು. ಅದು ಹೊಸ ಮುಖ ಯಾಕಾಗಬಾರದು? ಕೊನೆ ಪಕ್ಷ ಚಿತ್ರ ನಟಿಯರನ್ನು ಟಿವಿಯಲ್ಲಿ ನೋಡಿದಾಗ ಕ್ಷಣಿಕ ಸಂತೋಷ ಪಡಬಹುದು. ಇಲ್ಲದಿದ್ದರೆ ನಿಮಗೆ ಹೇಗೂ ಏನೂ ಸಿಗುವುದಿಲ್ಲ ಎಂದು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದರು ಕಾಟ್ಜು.
ಈ ವಿಚಾರ ದೇಶಾದ್ಯಂತ ಭಾರ ಸಂಚಲನ ಮೂಡಿಸಿತ್ತು. ಈ ವಿವಾದಾತ್ಮಕ ಹೇಳಿಕೆಗೆ ಇಂದು ಕ್ಷಮಾಪಣೆ ಕೇಳಿದ್ದಾರೆ ಕಾಟ್ಜು. ತಾನು ಈ ವಿಷಯವನ್ನು ಹಗುರ ಧಾಟಿಯಲ್ಲಿ ಮಾತನಾಡಿದ್ದೇನೆ ಹೊರತು ಉದ್ದೇಶಪೂರ್ವಕವಾಗಿ ಹೇಳಿಲ್ಲ. ಈ ನನ್ನ ಹೇಳಿಕೆಗಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.