ದೇಶ

ಮರು ನಾಮಕರಣ: ಪಿಐಎಲ್ ವಜಾ

ಬೆಂಗಳೂರು: ಗುಲ್ಬರ್ಗವನ್ನು ಕಲಬುರಗಿ ಹಾಗೂ ಬಿಜಾಪುರವನ್ನು ವಿಜಯಪುರ ಎಂದು ಸರ್ಕಾರ ಮರುನಾಮಕರಣ ಮಾಡಿದ್ದನ್ನು ಪ್ರಶ್ನಿಸಿ ಹೈ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬುಧವಾರ ವಜಾಗೊಂಡಿದೆ.

ಗುಲ್ಬರ್ಗಾ ಹಾಗೂ ಬಿಜಾಪುರ ಜಿಲ್ಲೆಗಳ ಹೆಸರನ್ನು ಸರ್ಕಾರ ಮರುನಾಮಕರಣ ಮಾಡಿದ್ದನ್ನು ಪ್ರಶ್ನಿಸಿ ಸೈಯದ್ ಮಜರ್ ಹುಸೇನ್ ಸೇರಿ ಎಂಟು ಮಂದಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ವೇಳೆ ಪ್ರಧಾನ ಸರ್ಕಾರಿ ವಕೀಲರಾದ ದೇವದಾಸ್, ರಾಜ್ಯ ಪುನರ್ವಿಂಗಡಣಾ ಕಾಯ್ದೆ 1956ರ ಸೆಕ್ಷನ್ 13ರ ಪ್ರಕಾರ ರಾಜ್ಯ ಸರ್ಕಾರಕ್ಕೆ ಜಿಲ್ಲೆಗಳ ಹೆಸರನ್ನು ಮರು ನಾಮಕಾರಣ ಮಾಡುವ ಮುನ್ನ ಕೇಂದ್ರ ಸರ್ಕಾರದಿಂದಲೂ ಒಪ್ಪಿಗೆ ಪಡೆದಿದ್ದೇವೆ.

ಹೆಸರು ಬದಲಾವಣೆ ಮಾಡಲು ಕೇಂದ್ರ ಸರ್ಕಾರದಿಂದ ಯಾವುದೇ ಆಕ್ಷೇಪಣೆ ಇಲ್ಲ ಎಂದು 2014ರ ಅ.17ರಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ ನಂತರವೇ ರಾಜ್ಯ ಸರ್ಕಾರ ಜಿಲ್ಲೆಗಳ ಮರುನಾಮಕರಣ ಮಾಡಿರುವುದಾಗಿ ಪೀಠದ ಗಮನಕ್ಕೆ ತಂದರು. ಈ ವಾದ ಪುರಸ್ಕರಿಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲಾ ಮತ್ತು ನ್ಯಾ.ರಾಮಮೋಹನ ರೆಡ್ಡಿ ಅವರ ವಿಭಾಗೀಯ ಪೀಠ, ಸರ್ಕಾರ ಅನುಸರಿಸಿರುವ ಕಾರ್ಯ ವಿಧಾನ ಸರಿಯಾಗಿರುವುದಾಗಿ ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿದೆ.

SCROLL FOR NEXT