ದೇಶ

ಜೆಡಿಯು, ಹಕ್ಕಾನಿ ನೆಟ್‌ವರ್ಕ್ ಸೇರಿ 12 ಉಗ್ರ ಸಂಘಟನೆಗೆ ಪಾಕ್ ನಿಷೇಧ?

Mainashree

ಇಸ್ಲಾಮಾಬಾದ್/ ಶ್ರೀನಗರ: ಅಮೆರಿಕದ ಒತ್ತಡಕ್ಕೆ ಮಣಿದು ತಾನೇ ಪೋಷಿಸಿ, ಬೆಳೆಸಿದ ಹಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದಾವಾ(ಜೆಡಿಯು) ಹಾಗೂ ಆಫ್ಘಾನಿ ಸ್ತಾನ ಮೂಲದ ಹಕ್ಕಾನಿ ನೆಟ್‌ವರ್ಕ್ ಸೇರಿ ಒಟ್ಟು 12 ಉಗ್ರ ಸಂಘಟನೆಗಳನ್ನು ಪಾಕ್ ಸರ್ಕಾರ ನಿಷೇಧಿಸಲು ನಿರ್ಧರಿಸಿದೆ. ಈ ಕುರಿತ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.

ಜೆಡಿಯು ನಿಷೇಧಿತ ಲಷ್ಕರ್-ಎ-ತೊಯ್ಬಾದ ಹೆಸರಷ್ಟೇ ಬೇರೆ. ಅವೆರಡೂ ಒಂದೇ ಸಂಘಟನೆಗಳು. ಜೆಡಿಯು ಮುಖ್ಯಸ್ಥ ಹಫೀಜ್ ಸಯೀದ್‌ನ ಸೂಚನೆಯಂತೆ ಲಷ್ಕರ್ ಉಗ್ರರು ದಾಳಿಗೆ ಸಂಚು ರೂಪಿಸುತ್ತಾರೆ. 2008ರ ಮುಂಬೈ ದಾಳಿ ಸೇರಿದಂತೆ ಭಾರತದ ಮೇಲೆ ಲಷ್ಕರ್ ನಡೆಸಿದ ಹಲವು ದಾಳಿಗಳಲ್ಲಿ ಜೆಡಿಯು ಮಹತ್ವದ ಪಾತ್ರವಹಿಸಿತ್ತು. ಇನ್ನು ಹಕ್ಕಾನಿ ನೆಟ್‌ವರ್ಕ್ 2008ರಲ್ಲಿ ಕಾಬೂಲ್‌ನ ಭಾರತೀಯ ರಾಯಭಾರಿ ಕಚೇರಿ ಮೇಲಿನ ದಾಳಿ ಸಂಚು ರೂಪಿಸಿತ್ತು. ಹೀಗಾಗಿ ಈ ಸಂಘಟನೆಗಳಿಗೆ ನಿಷೇಧ ಹೇರುವ ಕ್ರಮ ಭಾರತದ ಪಾಲಿಗೆ ಖುಷಿಯ ವಿಚಾರವಾಗಿದೆ.

ದಾಳಿಗೆ ಸಂಚು: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಜ.26ರ ಭಾರತ ಭೇಟಿಗೂ ಮುನ್ನ ಕಾಶ್ಮೀರ ಕಣಿವೆಯಲ್ಲಿ ಭಾರಿ ವಿಧ್ವಂಸಕ ಕೃತ್ಯ ಎಸಗಲು ಉಗ್ರರು ಸಂಚು ರೂಪಿಸಿದ್ದಾರೆ ಎಂದು ಭಾರತೀಯ ಸೇನೆ ಹೇಳಿದೆ. ಇದಕ್ಕಾಗಿ ಪಾಕ್ ನೆಲದಲ್ಲಿ 200 ಶಸ್ತ್ರಸಜ್ಜಿತ ಉಗ್ರರು ಗಡಿದಾಟಲು ಕಾದು ಕೂತಿದ್ದಾರೆ. ಹೀಗೆ ಗಡಿ ದಾಟಿ ಬಂದ ಐವರು ಉಗ್ರರು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುರುವಾರ ಯೋಧರ ಜತೆಗೆ ನಡೆದ ಗುಂಡಿನ ಚಕಮಕಿಯ್ಲಲಿ ಹತರಾಗಿದ್ದಾರೆ.

SCROLL FOR NEXT