ನವದೆಹಲಿ: ಪ್ರೇಮಸೌಧ ತಾಜ್‌ಮಹಲ್ ಮೇಲೆ ಉಗ್ರರು ದಾಳಿ ನಡೆಸುವ ಕುರಿತು ಗುಪ್ತಚರ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ ಹಿನ್ನಲೆಯಲ್ಲಿ ಆಗ್ರಾದ ಸುತ್ತಮುತ್ತ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ.
ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಇದೇ ಜನವರಿ 25ರಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತಕ್ಕೆ ಆಗಮಿಸಲಿದ್ದು, ಈ ವೇಳೆ ಅವರು ತಾಜ್‌ಮಹಲ್‌ಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇಲ್ಲಿಯೂ ಕೂಡ ಉಗ್ರರು ದಾಳಿ ನಡೆಸಬಹುದು ಎನ್ನುವ ಗುಪ್ತಚರ ಇಲಾಖೆಯ ಮೂಲಗಳ ಎಚ್ಚರಿಕೆಯ ಹಿನ್ನಲೆಯಲ್ಲಿ ಆಗ್ರಾದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ತಾಜ್‌ಮಹಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗಳುದ್ದಕ್ಕೂ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ತಾಜ್‌ಮಹಲ್ ಸುತ್ತಮುತ್ತಲಿನ ರಸ್ತೆಗಳಲ್ಲಿ ನಾಕಾಬಂದಿ ಹಾಕಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ದೆಹಲಿಯಿಂದ ತಾಜ್‌ಮಹಲ್‌ಗೆ ಸಂಪರ್ಕ ಕಲ್ಪಿಸುವ ದೆಹಲಿ-ಆಗ್ರಾ ಯಮುನಾ ಎಕ್ಸ್‌ಪ್ರೆಸ್ ರೈಲನ್ನು ಉಗ್ರರು ಗುರಿಯಾಗಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಈ ಮಾರ್ಗದಲ್ಲಿಯೂ ಭದ್ರತೆ ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಆಹ್ವಾನದ ಮೇರೆಗೆ ಇದೇ ಜನವರಿ 25ರಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತಕ್ಕೆ ಆಗಮಿಸಲಿದ್ದು, ಪತ್ನಿ ಮಿಶೆಲ್‌ರನ್ನು ಕೂಡ ಒಬಾಮ ಜೊತೆಗೆ ಕರೆದುಕೊಂಡು ಬರಲಿದ್ದಾರೆ.