ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿಯಲ್ಲಿ ಪ್ರಾಸಿಕ್ಯೂಷನ್ ಪರ ವಿಶೇಷ ವಕೀಲ(ಎಸ್‌ಪಿಪಿ) ಭವಾನಿ ಸಿಂಗ್ ಅವರ ಮುಂದುವರಿಕೆ ಕುರಿತು ತಕರಾರಿದ್ದರೆ, ಸುಪ್ರೀಂಕೋರ್ಟ್‌ನಿಂದ ಸ್ಪಷ್ಟೀಕರಣ ಪಡೆಯುವಂತೆ ಸೂಚಿಸಿ ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಸೋಮವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಆನಂದ್ ಭೈರಾರೆಡ್ಡಿ ಅವರ ಏಕಸದಸ್ಯ ಪೀಠ, ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ರಾಜ್ಯ ಹೈಕೋರ್ಟ್ ಮೇಲ್ಮನವಿ ಅರ್ಜಿ ವಿಚಾರಣೆಗೆ ವಿಶೇಷ ಪೀಠ ರಚಿಸಿ ವಿಚಾರಣೆ ನಡೆಸುತ್ತಿದೆ. ಮೇಲ್ಮನವಿ ಅರ್ಜಿ ಕುರಿತಂತೆ ಸುಪ್ರೀಂ ಕೋರ್ಟ್, ರಾಜ್ಯ ಹೈಕೋರ್ಟ್‌ಗೆ ನಿರ್ದಿಷ್ಟ ಕಾಲಾವಕಾಶ ನೀಡಿದ್ದು ಅರ್ಜಿ ವಿಲೇವಾರಿ ಮಾಡುವಂತೆ ನಿರ್ದೇಶಿಸಿದೆ.
ಆದ್ದರಿಂದ ಈ ನ್ಯಾಯಪೀಠ ಈ ಹಂತದಲ್ಲಿ ಮಧ್ಯೆ ಪ್ರವೇಶಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟು ಅಂರ್ಜಿ ಇತ್ಯರ್ಥಪಡಿಸಿದೆ.
ತಮಿಳುನಾಡಿನ ವಿಚಕ್ಷಣಾ ದಳ ಮತ್ತು ಭ್ರಷ್ಟಾಚಾರ ನಿಗ್ರಹ ದಳದ (ಡಿವಿಎಸಿ) ಪರವಾಗಿ ಎಸ್‌ಪಿಪಿ ಭವಾನಿ ಸಿಂಗ್ ಅವರ ಮುಂದುವರಿಕೆಯನ್ನು ಆಕ್ಷೇಪಿಸಿ ಡಿಎಂಕೆ ನಾಯಕ ಅನ್ಬಳಗನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿ, ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ಎಸ್‌ಪಿಪಿ ಅಪರಾಧಿಗಳಿಗೆ ಜಾಮೀನು ನೀಡಲು ತಮ್ಮದೇನೂ ಆಕ್ಷೇಪವಿಲ್ಲ ಎಂದುಹೇಳಿಕೆ ನೀಡುವ ಮೂಲಕ ಅನುಮಾನಸ್ಪದವಾಗಿ ನಡೆದಿಕೊಂಡಿದ್ದರು. ಹೀಗಿದ್ದಾಗ ಅವರನ್ನು ಮುಂದುವರಿಸುವುದು ನ್ಯಾಯಸಮ್ಮತವಲ್ಲ ಎಂದೂ ವಾದಿಸಿದರು.