ದೇಶ

7 ವರ್ಷದಲ್ಲಿ ಹುಲಿಗಳ ಸಾಮ್ರಾಜ್ಯವಾದ ಭಾರತ

Srinivasamurthy VN

ನವದೆಹಲಿ: ಕೇವಲ 7 ವರ್ಷಗಳ ಅವಧಿಯಲ್ಲಿ ಭಾರತದಲ್ಲಿರುವ ಹುಲಿಗಳ ಸಂಖ್ಯೆ ದುಪ್ಪಟ್ಟುಗೊಂಡಿದ್ದು, ಹುಲಿಗಳ ಸಂಖ್ಯೆ 1, 400ರಿಂದ 2, 226ಕ್ಕೇ ಏರಿಕೆಯಾಗಿದೆ.

ವಿಶ್ವದ ಒಟ್ಟಾರೆ ಹುಲಿ ಸಂತತಿಗಳ ಪೈಕಿ ಭಾರತದಲ್ಲೇ ಶೇ.70 ರಷ್ಟು ಹುಲಿಗಳಿವೆ. ಪ್ರಸ್ತುತ ಭಾರತದಲ್ಲಿ ಸುಮಾರು 2, 226 ಹುಲಿಗಳಿದ್ದು, ಕೇವಲ 7 ವರ್ಷಗಳ ಹಿಂದೆ ಇದೇ ಸಂಖ್ಯೆ 1, 400ರಷ್ಟಿತ್ತು.

ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಪರಿಸರ ಇಲಾಖೆ ಸಚಿವ ಪ್ರಕಾಶ್ ಜವೇಡಕರ್ ಅವರು, ಹುಲಿ ಸಂರಕ್ಷಣೆ ಕುರಿತಂತೆ ಸರ್ಕಾರ ಕೈಗೊಂಡಿದ್ದ ಯೋಜನೆಗಳು ಫಲ ನೀಡಿದ್ದು, ಏಳು ವರ್ಷಗಳ ಅವಧಿಯಲ್ಲಿ ಭಾರತದಲ್ಲಿನ ಹುಲಿಗಳ ಪ್ರಮಾಣ ದುಪ್ಪಟಾಗಿದೆ. ಪ್ರಸ್ತುತ ಭಾರತದಲ್ಲಿ 2, 226 ಹುಲಿಗಳಿದ್ದು, ಭಾರತ ಹುಲಿಗಳ ಸಾಮ್ರಾಜ್ಯವೆನಿಸಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಭಾರತದಲ್ಲಿರುವ ಹುಲಿಗಳ ಪೈಕಿ ಕರ್ನಾಟಕದಲ್ಲೇ ಅತ್ಯಧಿಕ ಅಂದರೆ 406 ಹುಲಿಗಳಿದ್ದು, ಉತ್ತರಖಂಡದಲ್ಲಿ 340 ಹುಲಿಗಳಿವೆ. ಇನ್ನು ತಮಿಳುನಾಡಿನಲ್ಲಿ 229 ಹುಲಿಗಳಿದ್ದು,  ಮಧ್ಯ ಪ್ರದೇಶದಲ್ಲಿ 208, ಮಹಾರಾಷ್ಟ್ರದಲ್ಲಿ 190 ಮತ್ತು ಪಶ್ಚಿಮ ಬಂಗಾಳದ ಸುಂದರ್‌ಬನ್ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 76 ಹುಲಿಗಳಿವೆ. ಕಳೆದ ಸಾಕಷ್ಟು ವರ್ಷಗಳಿಂದ ಹುಲಿ ಸಂತತಿಯನ್ನು ಉಳಿಸಲು ಕೇಂದ್ರ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಸರ್ಕಾರದಿಂದಲ್ಲದೇ ಹಲವು ಸಂಘ ಸಂಸ್ಥೆಗಳು ಕೂಡ ಹುಲಿ ಅಭಿಯಾನದಲ್ಲಿ ಪಾಲ್ಗೊಂಡು ಅವುಗಳ ರಕ್ಷಣೆಗೆ ಸಾಕಷ್ಟು ಶ್ರಮಿಸಿವೆ.

ಅಂತಾರಾಷ್ಟ್ರೀಯ ಕಳ್ಳ ಸಾಗಣೆದಾರರಿಂದ ಮತ್ತು ಬೇಟೆಗಾರರಿಂದ ಹುಲಿಗಳನ್ನು ರಕ್ಷಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೆಲ ಕಠಿಣ ಕಾನೂನುಗಳನ್ನು ಜಾರಿಗೆ ತಂದಿವೆ. ಹುಲಿಗಳ ಚರ್ಮದಿಂದ ಬಟ್ಟೆ, ಬೆಲ್ಟ್‌ಗಳು ತಯಾರು ಮಾಡಲಾಗುತ್ತದೆ. ವಿದೇಶಗಳಲ್ಲಿ ಮತ್ತು ದೇಶದ ಪ್ರಮುಖ ನಗರಗಳಲ್ಲಿ ಇದಕ್ಕೆ ಭಾರಿ ಬೇಡಿಕೆ ಇದೆ. ಹುಲಿಗಳ ಮೂಳೆ ಮತ್ತು ದೇಹದ ಕೆಲ ಭಾಗಗಳಿಂದ ಚೀನಾದಲ್ಲಿ ಔಷಧಿ ತಯಾರು ಮಾಡುತ್ತಿದ್ದಾರೆ. ಇದರಿಂದ ಗಡಿಯಲ್ಲಿ ಇದಕ್ಕೆ ತೀವ್ರ ಬೇಡಿಕೆ ಇದೆ. ಹೀಗಾಗಿಯೇ 20ನೇ ಶತಮಾನದಲ್ಲಿ 1 ಲಕ್ಷದಷ್ಟಿದ್ದ ಹುಲಿಗಳ ಸಂಖ್ಯೆ 2008ರ ಹೊತ್ತಿಗೆ ಕೇವಲ 1,411ಕ್ಕೆ ಇಳಿದಿತ್ತು. ಬಹುತೇಕ ಹುಲಿಗಳು ಬೇಟೆಗಾರರ ಬೇಟೆಗೆ ತುತ್ತಾಗಿ ಸಾವನ್ನಪ್ಪಿದ್ದವು.

2004ರಲ್ಲಿ ಪರಿಸರ ವಿಜ್ಞಾನಿಗಳು ಕೈಗೊಂಡಿದ್ದ ಸಂಶೋಧನೆ ವೇಳೆ ರಾಜಸ್ತಾನದ ಸರಿಸ್ಕಾ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಕೇವಲ ಒಂದೇ ಒಂದು ಹುಲಿ ಕೂಡ ಸಿಕ್ಕಿರಲಿಲ್ಲ. ಈ ಕುರಿತು ತಜ್ಞರ ತಂಡ ಸರ್ಕಾರಕ್ಕೆ ವರದಿ ಕೂಡ ನೀಡಿತ್ತು. ಆ ಬಳಿಕ ಎಚ್ಚೆತ್ತುಕೊಂಡ ಸರ್ಕಾರ, ಬೇಟೆಗಾರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿತ್ತು. ಅಲ್ಲದೆ ವನ್ಯ ಮೃಗ ಸಂರಕ್ಷಣೆ ಕುರಿತ ಕಾನೂನುಗಳಿಗೆ ಹಲವು ತಿದ್ದುಪಡಿಗಳನ್ನು ತಂದು, ಬೇಟೆಗಾರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿತ್ತು.

SCROLL FOR NEXT