ಬೆಂಗಳೂರು: ಉತ್ತಮ ರಸ್ತೆಗಳನ್ನೇ ಮಾದರಿ ರಸ್ತೆಯನ್ನಾಗಿಸಲು ಆಯ್ಕೆ ಮಾಡಿಕೊಳ್ಳುವ ಬದಲು ಸಾಮಾನ್ಯ ರಸ್ತೆಗಳನ್ನು ಆಯ್ಕೆ ಮಾಡಿ ಅವುಗಳನ್ನು ಅಭಿವೃದ್ಧಿಪಡಿಸಬಹುದಿತ್ತಲ್ಲವೇ ಎಂದು ಹೈಕೋರ್ಟ್ ಬಿಬಿಎಂಪಿಯನ್ನು ಪ್ರಶ್ನಿಸಿದೆ.
ನಗರದಲ್ಲಿ ಮಾದರಿ ರಸ್ತೆ ನಿರ್ಮಿಸುವ ಸಲುವಾಗಿ ಸುಸಜ್ಜಿತವಾಗಿರುವ ರಸ್ತೆಗಳನ್ನೇ ಪಾಲಿಕೆ ಆಯ್ಕೆ ಮಾಡಿಕೊಂಡಿದೆ. ರೇಸ್‌ಕೋರ್ಸ್ ರಸ್ತೆ, ಕಬ್ಬನ್ ರಸ್ತೆ ಹಾಗೂ ಸ್ಯಾಂಕಿ ರಸ್ತೆನಂತಹ ರಸ್ತೆಯನ್ನಾಗಿ ಮಾಡುವ ಅಗತ್ಯವೇನಿತ್ತು? ಈ ರಸ್ತೆಗಳು ಈಗಾಗಲೇ ಸುಸಜ್ಜಿತವಾಗಿವೆ.
ಇಲ್ಲಿ ಹೆಚ್ಚಾಗಿ ಉದ್ಯಮಿಗಳು ಹಾಗೂ ರಾಜಕಾರಣಿಗಳು ನೆಲೆಸಿದ್ದಾರೆ. ಅದರ ಬದಲಿಗೆ, ಚಿಕ್ಕಪೇಟೆ, ಓಕಳಿಪುರ, ಶ್ರೀರಾಂಪುರದಲ್ಲಿ ನಾವು ನಿಜವಾದ ಬೆಂಗಳೂರು ಕಾಣುತ್ತೇವೆ. ಜನಸಾಮಾನ್ಯರು ದಿನನಿತ್ಯ ಸಂಚರಿಸುವ ಮೆಜೆಸ್ಟಿಕ್, ರೈಲ್ವೇ ನಿಲ್ದಾಣದ ರಸ್ತೆ ಇಲ್ಲವೇ ಅವೆನ್ಯೂ ರಸ್ತೆಗಳನ್ನು ಆಯ್ಕೆ ಮಾಡಿಕೊಳ್ಳಬಹುತ್ತಿಲ್ಲವೇ ಎಂದು ನ್ಯಾ.ಕೆ.ಎಲ್. ಮಂಜುನಾಥ್ ಹಾಗೂ ನ್ಯಾ.ಸುಜಾತಾ ಅವರಿದ್ದ ವಿಭಾಗೀಯ ಪೀಠ ಬಿಬಿಎಂಪಿಯನ್ನು ಪ್ರಶ್ನಿಸಿತು.
ಮುಖ್ಯ ನ್ಯಾಯಮೂರ್ತಿಗಳ ಗೈರು ಹಾಜರಿಯ ಹಿನ್ನೆಲೆಯಲ್ಲಿ ಶಬ್ದ ಮಾಲನ್ಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ವಿಭಾಗೀಯ ಪೀಠ ಬಿಬಿಎಂಪಿಯ ಕಾರ್ಯವೈಖರಿಗೆ ಈ ರೀತಿಯಾಗಿ ಅಸಮಾಧಾನ ವ್ಯಕ್ತಪಡಿಸಿತು.