ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಹಾಗೂ ಹಾಲಿ ಶಾಸಕ ಬಿ.ವೈ.ರಾಘವೇಂದ್ರ ವಿರುದ್ಧ ದಾಖಲಾಗಿರುವ ಖಾಸಗಿ ದೂರಿನ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ನಡೆಸಬಹುದೆಂದು ಹೈಕೋರ್ಟ್ ಅನುಮತಿ ನೀಡಿದೆ.
ರಾಘವೇಂದ್ರ ಅವರು 2009ರಿಂದ 2014ರವರೆಗೆ ಸಂಸದರಾಗಿದ್ದ ವೇಳೆ ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆಂದು ಆರೋಪಿಸಿ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಕೀಲ ವಿನೋದ್ ಖಾಸಗಿ ದೂರು ದಾಖಲಿಸಿದ್ದರು. ಈ ದೂರನ್ನು ರದ್ದು ಪಡಿಸುವಂತೆ ಕೋರಿ ರಾಘವೇಂದ್ರ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾ.ಎನ್.ಆನಂದ ಅವರ ಏಕ ಸದಸ್ಯ ಪೀಠ, ರಾಘವೇಂದ್ರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ, ಸಿಬಿಐ ವಿಶೇಷ ನ್ಯಾಯಾಲಯ ಜ.31ರಿಂದ ದೂರಿನ ವಿಚಾರಣೆ ಆರಂಭಿಸುವಂತೆ ನಿದೇಶಿಸಿದೆ.
ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರಿನ ವಿಚಾರಣೆ ನಡೆಸುವ ಅಧಿಕಾರ ಇಲ್ಲ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ನಿರ್ದೇಶಿಸಿದರೆ ಮಾತ್ರ ಖಾಸಗಿ ದೂರಿನ ವಿಚಾರಣೆ ನಡೆಸಬೇಕು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಅವರ ವಾದವನ್ನು ತಿರಸ್ಕರಿಸಿದ ಪೀಠ, ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರಿನ ವಿಚಾರಣೆ ನಡೆಸುವ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿ ಅರ್ಜಿ ವಜಾಗೊಳಿಸಿದೆ.
ಆರೋಪವೇನು?
ರಾಘವೇಂದ್ರ ಅವರು 2009ರಿಂದ 2014ರವರೆಗೆ ಶಿವಮೊಗ್ಗದ ಸಂಸದರಾಗಿದ ಅವಧಿಯಲ್ಲಿ ಅವರ ಆಸ್ತಿಯಲ್ಲಿ ಸಾವಿರ ಪಟ್ಟು ಹೆಚ್ಚಳವಾಗಿದೆ. ಅಕ್ರಮವಾಗಿ ದೊಡ್ಡ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿದ್ದಾರೆಂದು ಆರೋಪಿಸಿ ಶಿವಮೊಗ್ಗದ ವಕೀಲ ಬಿ.ವಿನೋದಾ ಸಿಬಿಐ ವಿಶೇಷ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ದೂರನ್ನು ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿತ್ತು. ಇದನ್ನು ರಾಘವೇಂದ್ರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಸುಪ್ರೀಂಕೋರ್ಟ್, ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಅಥವಾ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಚಿಸಿದರೆ ಮಾತ್ರ ಸಿಬಿಐ ನ್ಯಾಯಾಲಯ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಬಹುದು. ಆದರೆ, ಖಾಸಗಿ ವ್ಯಕ್ತಿಗಳು ನೀಡುವ ಖಾಸಗಿ ದೂರನ್ನು ವಿಚಾರಣೆ ನಡೆಸುವ ಅಧಿಕಾರ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಇಲ್ಲ. ಹೀಗಾಗಿ, ಬಿ.ವಿನೋದ್ ತಮ್ಮ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ದಾಖಲಿಸಿದ ಖಾಸಗಿ ದೂರು ವಿಚಾರಣೆ ರದ್ದು ಪಡಿಸುವಂತೆ ರಾಘವೇಂದ್ರ ತಮ್ಮ ಅರ್ಜಿಯಲ್ಲಿ ಕೋರಿದ್ದರು.