ದೇಶ

ಪ್ರಸಾದ ತಿಂದು 160 ಮಂದಿ ಅಸ್ವಸ್ಥ

ಚಿನ್ಸುರಾಹ್(ಪಶ್ಚಿಮ ಬಂಗಾಳ): ಪೀರ್ ಮೇಳದಲ್ಲಿ ನೀಡಿದ ಪ್ರಸಾದ ತಿಂದು ಮಕ್ಕಳು ಸೇರಿದಂತೆ 160ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ಬುಧವಾರ ನಡೆದಿದೆ.

ಅರಾಮ್‌ಬಾಗ್‌ನ ಹೂಗ್ಲಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಪೀರ್ ಮೇಳದಲ್ಲಿ ಸೇರಿದ್ದ ನೂರಾರು ಭಕ್ತ ಜನರ ಪ್ರಸಾದ ತಿಂದು ಸ್ವಲ್ಪ ಸಮಯದ ನಂತರ ಅವರಿಗೆ ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡಿದೆ. ನಂತರ ಅಸ್ವಸ್ಥರಾದ 160 ಕ್ಕೂ ಹೆಚ್ಚು ಜನರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.

ಪ್ರಸಾದ ತಿಂದ ಜನರು ಕೆಲವು ನಿಮಿಷಗಳ ನಂತರ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಎಂದು ಹೇಳುತ್ತಿದ್ದರು. ನಂತರ ಎಲ್ಲರಿಗೂ ವಾಂತಿಯಾಗಲು ಶುರುವಾಯಿತು. ಕೂಡಲೇ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅರಮ್‌ಬಾಗ್‌ನ ಪುರಸಭೆ ಅಧ್ಯಕ್ಷ ಸ್ವಪನ್ ನಂದಿ ಹೇಳಿದ್ದಾರೆ.

ಜನರಿಗೆ ನೀಡಲಾದ ಪ್ರಸಾದದಿಂದಾಗಿ ಈ ರೀತಿಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪ್ರಸಾದವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿರುವ ಎಲ್ಲಾ ಭಕ್ತಾದಿಗಳ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಪ್ರಾಣಾಪಾಯಗಳು ಎದುರಾಗಿಲ್ಲ. ಶೀಘ್ರದಲ್ಲೇ ಎಲ್ಲರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುತ್ತದೆ ಎಂದು ಸ್ವಪನ್ ನಂದಿ ಹೇಳಿದ್ದಾರೆ.

ನಂತರ ಮಾತನಾಡಿರುವ ಜಿಲ್ಲಾ ಆರೋಗ್ಯ ಅಧಿಕಾರಿಯೊಬ್ಬರು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವೈದ್ಯರ ಗುಂಪನ್ನು ಕಳುಹಿಸಿ, ಸ್ಥಳದಲ್ಲೇ ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಯಿತು ಎಂದು ಹೇಳಿದ್ದಾರೆ.

SCROLL FOR NEXT