ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಕಾಯ್ದೆ ಉಲ್ಲಂಘಿಸುತ್ತಿರುವ ಕಾಲೇಜುಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಪದವಿ ಪೂರ್ವ ಶಿಕ್ಷಣ ಸಂಸ್ಥೆಯಾದ ಚೇತನಾ ಶಿಕ್ಷಣ ಟ್ರಸ್ಟ್ , ಶಿಕ್ಷಣ ಕಾಯ್ದೆಯ ನಿಯಮ ಉಲ್ಲಂಘಿಸಿ ಮಕ್ಕಳ ಭವಿಷ್ಯದ ಜತೆ ಆಟವಾಡುತ್ತಿದೆ. ಆದ್ದರಿಂದ ಚೇತನಾ ಶಿಕ್ಷಣ ಸುಪರ್ದಿಗೆ ಬರುವ ಎಲ್ಲಾ ಕಾಲೇಜುಗಳನ್ನು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಪರಿಶೀಲಿಸಿ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ನಾಗರಾಜು ಸೇರಿದಂತೆ ಹತ್ತು ಜನರು ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.
ವಿಚಾರಣೆ ನಡೆಸಿದ ಹಿರಿಯ ನ್ಯಾ.ಕೆ.ಎಲ್. ಮಂಜುನಾಥ್ ಹಾಗೂ ನ್ಯಾ.ಸುಜಾತ ಅವರಿದ್ದ ವಿಭಾಗೀಯ ಪೀಠ, ರಾಜ್ಯದಲ್ಲಿರುವ ಎಲ್ಲ ಪದವಿ ಪೂರ್ವ ಕಾಲೇಜುಗಳು ನಿಯಮದ ಪ್ರಕಾರ ನಡೆದುಕೊಳ್ಳದಿದ್ದರೆ ಅಂತಹ ಕಾಲೇಜುಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗಬೇಕು. ಕಾನೂನಿನ ವಿರುದ್ಧವಾಗಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಲ್ಲಿ ಅಂತಹ ಕಾಲೇಜುಗಳಿಗೆ ನೋಟಿಸ್ ನೀಡಬೇಕು. ಸರಿಯಾದ ವಿವರಣೆ ನೀಡದಿದ್ದರೆ ಅಂಥ ಕಾಲೇಜುಗಳನ್ನು ಮುಚ್ಚಲು ಕ್ರಮ ತೆಗೆದುಕೊಳ್ಳಬೇಕೆಂದು ವಿಭಾಗೀಯ ಪೀಠ ಮಹತ್ತರ ಆದೇಶ ನೀಡಿದೆ.
ಏನಿದು ಪ್ರಕರಣ?
ರಾಜ್ಯದ ವಿವಿಧೆಡೆಗಳಲ್ಲಿ ಸುಮಾರು 22 ಪದವಿ ಪೂರ್ವ ಕಾಲೇಜುಗಳನ್ನು ನಡೆಸುತ್ತಿರುವ ಚೇತನಾ ಶಿಕ್ಷಣ ಸಂಸ್ಥೆ ಕರ್ನಾಟಕ ಶಿಕ್ಷಣ ಕಾಯ್ದೆ 1983 ನಿಯಮ 4 ಹಾಗೂ ಕರ್ನಾಟಕ ಪದವಿ ಪೂರ್ವ ಶಿಕ್ಷಣ 2006ರ ನಿಯಮ ಉಲ್ಲಂಘಿಸಿದೆ. ಕಾಲೇಜುಗಳು ನಡೆಸಬೇಕಾದಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಈ ಶಿಕ್ಷಣ ಸಂಸ್ಥೆ ವಿಫಲವಾಗಿದೆ.
ಈ ಮೂಲಕ ವಿದ್ಯಾರ್ಥಿಗಳು ಶೈಕ್ಷಣಿಕ ವಿಧ್ಯಾಭ್ಯಾಸಕ್ಕೆ ಮಾರಕವಾಗಿದೆ. ಈ ಕಾಲೇಜುಗಳು ಆರಂಬಿsಸುವ ಮುನ್ನ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಅನಧಿಕೃತವಾಗಿ ಕಾಲೇಜುಗಳನ್ನು ಆರಂಬಿsಸಿದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು. ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಈ ಕಾಲೇಜುಗಳು ಶಿಕ್ಷಣ ಕಾಯ್ದೆ ಪ್ರಕಾರ ನಡೆದುಕೊಳ್ಳುತ್ತಿದೆಯೇ ಎಂದು ಸರ್ಕಾರ ಪರಿಶೀಲಿಸಬೇಕು. ನಿಯಮ ಉಲ್ಲಂಘಿಸಿ ಕಾಲೇಜು ಆರಂಭಿಸಿರುವುದು ಕಂಡುಬಂದರೆ ಮೂರು ತಿಂಗಳ ಒಳಗಾಗಿ ಈ ಕಾಲೇಜುಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
ಮಾತ್ರವಲ್ಲದೇ ರಾಜ್ಯದಲ್ಲಿರುವ ಎಲ್ಲಾ ಕಾಲೇಜುಗಳು ನಿಯಮದ ಪ್ರಕಾರ ನಡೆದುಕೊಳ್ಳುತ್ತಿದೆಯೇ ಎಂದು ಪರಿಶೀಲಿಸಬೇಕು. ನಿಯಮ ಉಲ್ಲಂಘಿಸಿರುವುದು ಗಮನಕ್ಕೆ ಬಂದರೆ ಮುಂಚಿತವಾಗಿ ನೋಟಿಸ್ ನೀಡಿ ವಿವರಣೆ ಪಡೆದುಕೊಳ್ಳಬೇಕು. ವಿವರಣೆ ತೃಪ್ತಿದಾಯಕವಾಗದಿದ್ದಲ್ಲಿ ಅಂತಹ ಕಾಲೇಜುಗಳನ್ನು ಮುಚ್ಚಬೇಕು ಎಂದು ಆದೇಶ ನೀಡಿದೆ.