ನವದೆಹಲಿ: ಇನ್ನು ಮುಂದೆ ನಿಮ್ಮ ವೆಬ್‍ಸೈಟ್‍ನಲ್ಲಿ ಲಿಂಗ ಪತ್ತೆ ಬಗ್ಗೆ ಜಾಹೀರಾತನ್ನು ಹಾಕಬಾರದು ಎಂದು ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಕಂಪನಿಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ಆದೇಶ ನೀಡಿದೆ.
ಈ ಬಗ್ಗೆ ಮಧ್ಯಂತರ ಆದೇಶ ನೀಡಿರುವ ಸುಪ್ರೀಂ, ಈ ಮೂರು ಅಂತರ್ಜಾಲ ಕಂಪನಿಗಳು ಭ್ರೂಣಲಿಂಗ ಪತ್ತೆ ಬಗ್ಗೆ ಜಾಹೀರಾತು ನೀಡುವುದಾಗಲೀ ಅಥವಾ ಇಂಥ ಜಾಹೀರಾತುಗಳಿಗೆ ಪ್ರಾಯೋಜಕತ್ವ ನೀಡುವುದಾಗಲೀ ಮಾಡುವಂತಿಲ್ಲ. ಒಮ್ಮೆ ಮಾಡಿದ್ದೇ ಆದಲ್ಲಿ ಅಂಥ ಕಂಪನಿಗಳ ವಿರುದ್ಧ ಪಿಸಿ-ಪಿಎನ್‍ಡಿಟಿ ಕಾಯ್ದೆಯ ಸೆಕ್ಷನ್ 22ರ ಅಡಿ ಕಾನೂನು ಉಲ್ಲಂಘನಾ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಹೀಗಾಗಿ ಈ ಕಾಯ್ದೆಯಡಿ ಕೂಡಲೇ ತನ್ನ ವೆಬ್‍ಸೈಟ್‍ಗಳಲ್ಲಿ ಹಾಕಲಾಗಿರುವ ಇಂಥ ಜಾಹೀರಾತುಗಳನ್ನು ತೆಗೆದುಹಾಕಬೇಕು. ಜತೆಗೆ ಈ ಕಾಯ್ದೆಯ ವಿವರ ಮತ್ತು ನಿಯಮಗಳನ್ನೊಳಗೊಂಡ ನಮ್ಮ ಆದೇಶವನ್ನು ನಿಮ್ಮ ಸೇವಾ ಪೂರೈಕೆ ವಿಭಾಗದಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ಸೂಚಿಸಿದೆ.