ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕಿ ಹಾಗೂ ಮಾಜಿ ಕೇಂದ್ರ ಸಚಿವೆ ಜಯಂತಿ ನಟರಾಜನ್ ಅವರು ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿದ್ದಾರೆ.
ಈ ಕುರಿತು ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ಸೇರಿ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಸುವ ಉದ್ದೇಶ ನನಗಿರಲಿಲ್ಲ. ಸೋನಿಯಾ ಗಾಂಧಿ ಅವರಿಗೆ ನಾನು ಬರೆದಿದ್ದ ಪತ್ರದ ಬಗ್ಗೆ ಇವತ್ತು ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು. ಹಾಗಾಗಿ ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡಲೇಬೇಕಾಯ್ತು ಎಂದ ಅವರು, ಇದು ನನಗೆ ಅತ್ಯಂತ ನೋವಿನ ದಿನ, ಕಾಂಗ್ರೆಸ್‌ನಲ್ಲೇ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಬೇಸರವುಂಟು ಮಾಡಿದೆ. ಈ ಹಿನ್ನಲೆಯಲ್ಲಿ ನಾನು ರಾಜಿನಾಮೆ ನೀಡುತ್ತಿದ್ದೇನೆ ಎಂದು ವಿಷಾಧಿಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ನಾನು ಮಾಡಿರುವ ಆರೋಪ ಸತ್ಯವಾಗಿದೆ. ನಾನು ಸಚಿವೆಯಾಗಿದ್ದಾಗ ಬೃಹತ್ ಯೋಜನೆಗಳಲ್ಲಿ ಎನ್‌ಜಿಒಗಳ ಪರವಾಗಿ ರಾಹುಲ್ ಗಾಂಧಿ ನನ್ನ ಮೇಲೆ ಒತ್ತಡ ಹೇರುತ್ತಿದ್ದರು. ನನಗೆ ನನ್ನ ಕೆಲಸ ಮಾಡಲು ಬಿಡದೆ, ನಾನು ಏನು ಮಾಡಬೇಕೆಂದು ರಾಹುಲ್ ನಿರ್ದೇಶನ ಮಾಡುತ್ತಿದ್ದರು. ರಾಹುಲ್ ಗಾಂಧಿ ಕಚೇರಿಯಿಂದ ನಿದೇರ್ಶನ ಬರುತ್ತಿತ್ತು. ಪರಿಸರ ಖಾತೆ ಕ್ಲಿಯರೆನ್ಸ್‌ಗೆ ಒತ್ತಡ ಹೇರಿದ್ದರು. ದೊಡ್ಡ ದೊಡ್ಡ ಯೋಜನೆಗಳು ಸಂಪೂರ್ಣವಾಗಿ ಸ್ಥಗಿತವಾಗಿದ್ದವು. ಇದರಿಂದ ನಾನು ಸಂಕಷ್ಟಕ್ಕೆ ಸಿಲುಕಿದ್ದೆ.
ಇಷ್ಟೇ ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಲು ನಾನು ನಿರಾಕರಿಸಿದ್ದೆ, ವಿನಾಕಾರಣ ವೈಯಕ್ತಿಕ ವಾಗ್ದಾಳಿ ಬೇಡವೆಂದು ತಿಳಿಸಿದ್ದೆ. ಆದರೆ, ಸ್ನೂಪ್‌ಗೇಟ್ ಕೇಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಲು ಒತ್ತಾಯ ಮಾಡಿದ್ದರು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಭೇಟಿಗೆ ಹಲವು ಬಾರಿ ಯತ್ನಿಸಿದ್ದೆ ಆದರೆ, ಯಾವುದೇ ಪ್ರಯೋಜನವಾಗಿಲ್ಲ.
ಈ ಹಿಂದಿನ ಮೌಲ್ಯ, ಆದರ್ಶಗಳು ಪಕ್ಷದಲ್ಲಿ ಉಳಿದಿಲ್ಲ. ಕಳೆದ 11 ತಿಂಗಳಿನಿಂದ ನಾನು ಸಾಕಷ್ಟು ನೊಂದಿದ್ದು, ಸಂಪುಟ ಸಭೆ ನಡೆಯುವಾಗ ಮುಜುಗರ ಅನುಭವಸಿರುವುದಲ್ಲದೇ, ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಬೇಸತ್ತು ನನ್ನ ಪಕ್ಷದ ಎಲ್ಲಾ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಕುಟುಂಬದ ನಾಲ್ಕು ತಲೆಮಾರು ಪಕ್ಷಕ್ಕಾಗಿ ಸೇವೆ ಮಾಡಿದ್ದು, ನಾನು 30 ವರ್ಷದಿಂದ ಪಕ್ಷದಲ್ಲಿ ಗುರಿತಿಸಿಕೊಂಡಿದ್ದೇನೆ. ಇಷ್ಟು ದಿನವೂ ಕಾಂಗ್ರೆಸ್ ಹೇಳಿದಂತೆ ನಾನು ನಡೆದಿದ್ದೇನೆ. ರಾಜ್ಯಸಭೆಗೆ ಅವಕಾಶ ನೀಡಿದ್ದಕ್ಕೆ ಹಾಗೂ ಕಾಂಗ್ರೆಸ್‌ನಲ್ಲಿ ಸೇವೆಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿದ್ದಾರೆ.