ನವದೆಹಲಿ : ವಿದೇಶಾಂಗ ನೀತಿ ನಿರೂಪಣೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಹಿಡಿತ ಬಿಗಿಯಾತೊಡಗಿದೆ. ದೇಶದ ಅತಿ ಉನ್ನತ ಹುದ್ದೆಯ ಅಧಿಕಾರಿ ಸುಜಾತಾ ಸಿಂಗ್ ರನ್ನು ಕೆಳಗಿಳಿಸಿ ಆ ಹುದ್ದೆಗೆ ಎಸ್ ಜೈಶಂಕರ್ ಅವರನ್ನು ನೇಮಕ ಮಾಡಿರುವುದೇ ಇದಕ್ಕೆ ಸಾಕ್ಷಿ. ವಿದೇಶಾಂಗ ವ್ಯವಹಾರಗಳಲ್ಲಿ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಮಹತ್ವದ ಹೆಜ್ಜೆಯಿದು. ಇದೇ ವೇಳೆ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ವಾಪಸಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಸುಜಾತಾ ಸಿಂಗ್‍ರನ್ನು ಅವಧಿಗೆ ಮುನ್ನವೇ ವಜಾ ಮಾಡಲು ನೈಜ ಕಾರಣ ಏನು ಎಂದು ಪ್ರಶ್ನಿಸಿರುವ ಕಾಂಗ್ರೆಸ್ಸ್ ಪ್ರಧಾನಿ ಮೋದಿ ಉತ್ತರಿಸಬೇಕು ಎಂದು ಆಗ್ರಹಿಸಿದೆ. ಇದಕ್ಕೆ
ಪ್ರತಿಕ್ರಿಯಿಸಿರುವ ಬಿಜೆಪಿ, ಸುಜಾತಾ ವಜಾ ಹಿಂದೆ ರಾಜಕೀಯ ಕಾರಣವಿಲ್ಲ. ಹಿಂದಿನ ಸರ್ಕಾರಗಳೂ ಇದನ್ನೇ ಮಾಡಿದ್ದವು ಎಂದು ಹೇಳಿದೆ. ಈ ನಡುವೆ ವಿದೇಶಾಂಗ ಕಾರ್ಯದರ್ಶಿ ಯಾಗಿ ಗುರುವಾರ ಜೈಶಂಕರ್ ಅಧಿಕಾರ ಸ್ವೀಕರಿಸಿದ್ದಾರೆ.
ಜೈಶಂಕರ್ ಸ್ಥಾನಕ್ಕೆ ಅರುಣ್?: ವಿದೇಶಾಂಗ ಇಲಾಖೆ ಕಾರ್ಯದರ್ಶಿಯಾಗಿ ಎಸ್. ಜೈಶಂಕರ್ ಆಯ್ಕೆಯಾದ ಬೆನ್ನಲ್ಲೇ, ಅಮೆರಿಕದಲ್ಲಿ ತೆರವಾದ ರಾಯಭಾರ ಹುದ್ದೆಗೆ
ಫ್ರಾನ್ಸ್ ನಲ್ಲಿ ಭಾರತ ರಾಯಭಾರಿ ಅರುಣ್ ಕುಮಾರ್ ಸಿಂಗ್ ಅವರನ್ನು ನೇಮಿಸುವ ಸಾಧ್ಯತೆ ಇದೆ. ಈ ಬಗ್ಗೆ ಶೀಘ್ರವೇ ಅಧಿ ಕೃತ ಆದೇಶ ಹೊರಬೀಳಲಿದೆ.