ನವದೆಹಲಿ: `ನನ್ನ ಘನತೆಗೆ ಮಸಿ ಬಳಿಯಲಾಯಿತು, ನನ್ನ ಕಾರ್ಯ ಕ್ಷಮತೆಯನ್ನು ಪ್ರಶ್ನಿಸಲಾಯಿತು. ಸರ್ಕಾರಕ್ಕೆ ಇದರ ಅಗತ್ಯವಿತ್ತೇ?' ಇದು ಕೇಂದ್ರ ಸರ್ಕಾರದಿಂದ ಬುಧವಾರ ವಜಾಗೊಂಡ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಪ್ರಶ್ನೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಕೇಂದ್ರದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರ ಇಷ್ಟೊಂದು ಕೀಳುಮಟ್ಟಕ್ಕೆ ಇಳಿದಿದ್ದಾದರೂ ಹೇಗೆ ಎಂದೂ ಪ್ರಶ್ನಿಸಿದ್ದಾರೆ. ಕಳೆದ 8 ತಿಂಗಳಲ್ಲಿ ಈ ಸರ್ಕಾರ ವಿದೇಶಾಂಗ ನೀತಿಗೆ ಸಂಬಂಧಿಸಿ ಹಲವು ಕ್ರಮಗಳನ್ನು ಕೈಗೊಂಡಿದೆ. ಅವುಗಳಲ್ಲಿ ನಾನು ಸಕ್ರಿಯ ಪಾತ್ರ ವಹಿಸಿದ್ದೇನೆ.
ಪ್ರಧಾನಿ ಮೋದಿಯಿಂದಾಗಲೀ, ವಿದೇಶಾಂಗ ಸಚಿವೆ ಸುಷ್ಮಾರಿಂದಾಗಲೀ ಇದನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದೂ ಹೇಳಿದ್ದಾರೆ ಸುಜಾತಾ ಸಿಂಗ್. ನಾನು ಎಲ್ಲವನ್ನೂ ಸರಿಯಾಗಿಯೇ ಮಾಡುತ್ತಿದ್ದೆ. ಏಕೆಂದರೆ ಗೌರವಪೂರ್ವಕವಾಗಿ ಹೊರಹೋಗಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಆದರೆ ಸರ್ಕಾರ ಮಾತ್ರ ಅದಕ್ಕೆ ಅವಕಾಶ ನೀಡಲಿಲ್ಲ. ವಜಾ ಮಾಡುವ ನಿರ್ಧಾರವನ್ನು ಸರ್ಕಾರ ಮೊದಲೇ ಕೈಗೊಂಡಿತ್ತು. ಹಾಗಾಗಿ ನಾನು ಏನು ಮಾಡಿದರೂ ಪ್ರಯೋಜನವಾಗುತ್ತಿರಲಿಲ್ಲ ಎಂದಿದ್ದಾರೆ ಸುಜಾತಾ .