ಲಲಿತ್ ಮೋದಿ, ರಾಹುಲ್ ಮತ್ತು ವಾದ್ರಾರಿಂದ ಐಪಿಎಲ್ ಪಂದ್ಯ ವೀಕ್ಷಣೆ
ನವದೆಹಲಿ: ಐಪಿಎಲ್ ಹಗರಣದಿಂದ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿರುವ ಲಲಿತ್ ಮೋದಿ ಟ್ವಿಟರ್ ಮೂಲಕ ಮತ್ತೆ-ಮತ್ತೆ ಚರ್ಚೆಯಾಗುತ್ತಿದ್ದು, ಇದೀಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತಮ್ಮ ಚರ್ಚೆಯ ಕೇಂದ್ರ ಬಿಂದುವಾಗಿಸಿಕೊಂಡಿದ್ದಾರೆ.
ವೀಸಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸತತವಾಗಿ ಸುದ್ದಿಯಲ್ಲಿರುವ ಲಲಿತ್ ಮೋದಿ ಇಂದು ಮತ್ತೆ ಟ್ವಿಟರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡಿರುವ ಲಲಿತ್ ಮೋದಿ, ಐಪಿಎಲ್ ಸಮಯದಲ್ಲಿ ರಾಹುಲ್ ಗಾಂಧಿ ಕೂಡ ತಮ್ಮಿಂದ ಆತಿಥ್ಯ ಸ್ವೀಕರಿಸಿದ್ದರು ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಸಾಕ್ಷಿ ಎಂಬಂತೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರೊಂದಿಗೆ ಐಪಿಎಲ್ ಪಂದ್ಯ ವೀಕ್ಷಿಸುತ್ತಿರುವ ಭಾವಚಿತ್ರಗಳನ್ನು ಕೂಡ ಲಲಿತ್ ಮೋದಿ ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ಸ್ಪಷ್ಟನೆ ನೀಡುವಂತೆಯೂ ರಾಹುಲ್ ಮತ್ತು ರಾಬರ್ಟ್ ವಾದ್ರಾ ಅವರನ್ನು ಪ್ರಶ್ನಿಸಿದ್ದಾರೆ.
ಲಲಿತ್ ಮೋದಿ ಅಪ್ ಲೋಡ್ ಮಾಡಿರುವ ಈ ಭಾವಚಿತ್ರದಲ್ಲಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಮತ್ತು ಮಗ ರಾಹುಲ್ ಗಾಂಧಿ ಇಬ್ಬರೂ ಪಕ್ಕಪಕ್ದಲ್ಲೇ ಕುಳಿತಿದ್ದು, ಪಂದ್ಯ ವೀಕ್ಷಣೆ ಮಾಡುತ್ತಿದ್ದಾರೆ. ಇದೇ ಭಾವಚಿತ್ರದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಮಾಲೀಕರಾದ ಶಾರುಖ್ ಮತ್ತು ಅವರ ಪತ್ನಿ ಗೌರಿಖಾನ್, ನಟಿ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಮಹೇಶ್ ಭಟ್ ಕೂಡ ಇದ್ದಾರೆ.
ಕೆಲ ದಿನಗಳ ಹಿಂದಷ್ಟೇ ಇದೇ ಲಲಿತ್ ಮೋದಿ, ಲಂಡನ್ ನಲ್ಲಿ ತಾವು ವರುಣ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ರೆಸ್ಟೋರೆಂಟ್ ನಲ್ಲಿ ಭೇಟಿ ಮಾಡಿದ್ದೆ ಎಂದು ಹೇಳಿಕೊಂಡಿದ್ದರು. ಅಲ್ಲದೆ ಪ್ರಕರಣ ಸಂಬಂಧ ತಮ್ಮ ಆಂಟಿ ಸೋನಿಯಾ ಗಾಂಧಿ ಅವರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳುವಂತೆ ವರುಣ್ ಗಾಂಧಿ ಸಲಹೆ ನೀಡಿದ್ದರು ಎಂದು ಟ್ವೀಟ್ ಮಾಡಿದ್ದರು.