ನವದೆಹಲಿ: ಭಾರತವನ್ನು ಆವಿಷ್ಕಾರದ ಕೇಂದ್ರವನ್ನಾಗಿಸಲು ಸರ್ಕಾರ ಬಯಸುತ್ತಿದೆ. ಇದಕ್ಕಾಗಿ ದೇಶದಲ್ಲಿ ಉದ್ಯಮ, ಆವಿಷ್ಕಾರದ ಹಾದಿ ಸರಳಗೊಳಿಸಲು ಸರ್ಕಾರ ಎಲ್ಲ ನೆರವು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ದೆಹಲಿಯಲ್ಲಿ ನಡೆದ ``ಡಿಜಿಟಲ್ ಡೈಲಾಗ್'' ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿ ಈ ವಿಚಾರ ತಿಳಿಸಿದ್ದಾರೆ. ಡಿಜಿಟಲೈಸೇಷನ್ ಕುರಿತು ಸಾಮಾಜಿಕ ತಾಣದಲ್ಲಿ ಹರಿದು ಬಂದ ಹಲವು ಸಲಹೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ನಾವು ಈ ಹಿಂದೆ ನೋಡಿದಕ್ಕಿಂತ ಹೆಚ್ಚು ಕ್ಷಿಪ್ರವಾಗಿ ವಿಶ್ವ ಬದಲಾಗುತ್ತಿದೆ. ನಾವು ಈ ಬದಲಾವಣೆಯನ್ನು ಉಪೇಕ್ಷಿಸುವಂತಿಲ್ಲ. ಆವಿಷ್ಕಾರಗಳಿಗೆ ಕೈಹಾಕದೆ ಹೋದರೆ, ಆವಿಷ್ಕಾರಿ ತಂತ್ರಜ್ಞಾನಗಳನ್ನು ಹೊರ ತರದಿದ್ದರೆ ನಿಂತ ನೀರಾಗಬೇಕಾದೀತು. ಹೊಸ ಆವಿಷ್ಕಾರಗಳಿಗೆ ಸಂಬಂಧಿಸಿ ಸರ್ಕಾರ ಎಲ್ಲ ರೀತಿಯ ನೆರವು ನೀಡಲು ಬದ್ಧವಾಗಿದೆ. ಆವಿಷ್ಕಾರದಿಂದ ದೇಶದ ಬೆಳವಣಿಗೆಯ ವೇಗ ಹೆಚ್ಚಾಗಲಿದೆ. ಈಗ ಅತಿದೊಡ್ಡ ಉದ್ಯಮವಾಗಿ ಬೆಳೆದಿರುವ ಕಂಪನಿಗಳು ನಿನ್ನೆ ಸ್ಟಾರ್ಟ್ ಅಪ್ ಗಳಾಗಿದ್ದವು. ಅವುಗಳು ಉದ್ಯಮದ ಸ್ಫೂರ್ತಿ ಯಿಂದ ಆರಂಭವಾಗಿದ್ದವು. ಕಠಿಣ ಪರಿಶ್ರಮ
ಹಾಗೂ ನಿಷ್ಠೆಯಿಂದ ಅವುಗಳ ಸಾಹಸ ಪ್ರವೃತ್ತಿ ಜೀವಂತವಾಗಿ ಉಳಿದಿದೆ. ಈ ಮೂಲಕ ಆ ಕಂಪನಿಗಳು ಇಂದು ಆವಿಷ್ಕಾರಗಳಿಂದ ಧ್ರುವತಾರೆಗಳಾಗಿವೆ ಎಂದು ಮೋದಿ ಹೇಳಿದ್ದಾರೆ.
ಆಗ ಬೇಟಿ ಬಚಾವೋ- ಸೆಲ್ಫಿ ಬನಾವೋ: ಈಗ ಡಿಜಿಟಲ್ ಇಂಡಿಯಾ ವಿಥ್ ಲಾಡೋ! ಪಂಜಾಬ್ ನ ಬಿಬಿಪುರ್ ಗ್ರಾಮದ ಬೇಟಿ ಬಜಾವೋ- ಸೆಲ್ಫಿ ಬನಾವೋ ಕಾರ್ಯಕ್ರಮ ಪ್ರಧಾನಿ ಮೋದಿ ಅವರ ಗಮನಸೆಳೆದು ಸೆಲ್ಫೀ ವಿಥ್ ಡಾಟರ್ ಆಂದೋ ಲನವಾಗಿ ರೂಪುಗೊಂಡದ್ದು ಗೊತ್ತೇ ಇದೆ. ಈಗ್ರಾಮ ಈಗ ಮತ್ತೊಂದು ವಿಶಿಷ್ಟ ಕಾರ್ಯಕ್ರಮಕ್ಕೆ ಕೈಹಾಕಿದೆ. ಅದು ``ಡಿಜಿಟಲ್ ಇಂಡಿಯಾ ವಿಥ್ ಲಾಡೋ(ಮಗಳು)!'' ಇದರಡಿ ಗ್ರಾಮದ ಪ್ರತಿ ಮನೆಯ ನಾಮಫಲಕದಲ್ಲಿ ಕುಟುಂಬದ ಹಿರಿಯನ ಬದಲು ಮಗಳ ಹೆಸರು ಹಾಕಿಲಾಗುತ್ತದೆ. ಮಗಳ ಹೆಸರಿನ ಇ-ಮೇಲ್ ಐಡಿಯೂ ಅದರಲ್ಲಿರುತ್ತದೆ. ಈ ಸಂಬಂಧ ಗ್ರಾಪಂ ಸದಸ್ಯರು ಗ್ರಾಮದ ಪ್ರತಿ ಮನೆಗೆ ಹೋಗಿ ಮಗಳ ಹೆಸರಿರುವ ಹಾಗೂ ಆಕೆಯ ಇಮೇಲ್ ಐಡಿ ಇರುವ ನಾಮಫಲಕ ಹಾಕಲು ನಿರ್ಧರಿಸಿದ್ದಾರೆ. ಫಲಕಗಳ ಕೆಳಗೆ ಡಿಜಿಟಲ್ ಇಂಡಿಯಾ ವಿಥ್ ಲಾಡೋ ಎನ್ನುವ ಟ್ಯಾಗ್ ಲೈನ್ ಕೂಡ ಇರುತ್ತದೆ ಎಂದು ಪಂಚಾಯತ್‍ನ ಮುಖ್ಯಸ್ಥ ಸುನಿಲ್ ಜಗ್ಲಾನ್ ಹೇಳಿದ್ದಾರೆ. ಭಾನುವಾರ ಇದಕ್ಕೆ ಚಾಲನೆ ನೀಡಲಾಗಿದೆ.
ಕೃತಿ ತಿವಾರಿ ಡಿಜಿಟಲ್ ಇಂಡಿಯಾ ರಾಯಭಾರಿ
ಐಐಟಿ-ಜೆಇಇ ಪರೀಕ್ಷೆಯಲ್ಲಿ ದೇಶಕ್ಕೇ ಮೊದಲ ಸ್ಥಾನ ಪಡೆದಿರುವ ಇಂದೋರ್‍ನ ಯುವತಿ ಕೃತಿ ತಿವಾರಿ ಅವರನ್ನು ಡಿಜಿಟಲ್ ಇಂಡಿಯಾ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. ಖುದ್ದು ಪ್ರಧಾನಿ ಮೋದಿ ಯವರೇ ಈ ಹುದ್ದೆಗೆ ತಿವಾರಿ ಹೆಸರನ್ನು ಆಯ್ಕೆ ಮಾಡಿದ್ದಾರೆ. ಕೃತಿ ಅವರು ಮುಂದಿನ ಒಂದು ವರ್ಷ ಕಾಲ ಪ್ರಧಾನಿಯವರ ಜತೆಗೂಡಿ ದೇಶವಿಡೀ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಡಿಜಿಟಲ್ ಇಂಡಿಯಾದ ಮಹತ್ವವನ್ನು ಅವರು ಸಾರಲಿದ್ದಾರೆ ಎಂದು ಸಿಎನ್‍ಎನ್-ಐಬಿಎನ್ ವರದಿ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೃತಿ , ``ಸರ್ಕಾರದ ಪ್ರಮುಖ ಯೋಜನೆ ಪ್ರಚಾರಕ್ಕಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಇ-ಸ್ಕಾಲರ್‍ಶಿಪ್ ವಿದ್ಯಾರ್ಥಿಗಳಿಗೆ ಪ್ರಮುಖ ವಾದದ್ದು. ಇಂಥ ಯೋಜನೆಯಲ್ಲಿ ಪಾಲ್ಗೊಳ್ಳುವುದು ಹೆಮ್ಮೆ ಎನಿಸುತ್ತದೆ'' ಎಂದಿದ್ದಾರೆ.