ದೇಶ

ವ್ಯಾಪಂ ಹಗರಣ: ನಮ್ರತಾ ದಾಮೋರ್ ಕೇಸ್ ರೀ ಓಪನ್ ಮಾಡುವಂತೆ ಸೂಚನೆ

ಉಜ್ಜಯಿನಿ: ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ 2012 ರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಎಂಬಿಬಿಎಸ್ ವಿದ್ಯಾರ್ಥಿನಿಯ ಪ್ರಕರಣವನ್ನು ರೀ ಓಪನ್ ಮಾಡುವಂತೆ ಅಧಿಕಾರಿಗಳು ಪೊಲೀಸರಿಗೆ ಬುಧವಾರ ಸೂಚನೆ ನೀಡಿದ್ದಾರೆ.

ವ್ಯಾಪಂ ಹಗರಣ ಪ್ರಕರಣವು ದೇಶದಾದ್ಯಂತ ಸುದ್ದಿ ಮಾಡುತ್ತಿದ್ದು, ಪ್ರಕರಣ ಸಂಬಂಧ ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.  ವ್ಯಾಪಂ ಹಗರಣದಲ್ಲಿ ಭಾಗಿಯಾಗಿ ನಮ್ರತಾ ದಾಮೋರ್ ಎಂಬ ವಿದ್ಯಾರ್ಥಿನಿ 2009 ರಲ್ಲಿ ಮೆಡಿಕಲ್ ಸೀಟ್ ಪಡೆದುಕೊಂಡಿದ್ದಳು ಎಂದು ಹೇಳಲಾಗುತ್ತಿತ್ತು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿದ್ಯಾರ್ಥಿಯ ಶವ 2012 ರಲ್ಲಿ ಉಜ್ಜಯನಿಯ ರೈಲ್ವೆ ಟ್ರ್ಯಾಕ್ ಬಳಿ ಸಿಕ್ಕಿತ್ತು. ವ್ಯಾಪಂ ಹಗರಣದ ಸುತ್ತ ಹಲವು ಅನುಮಾನಗಳು ಸುತ್ತಿಕೊಂಡಿದ್ದ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ಸಾವನ್ನಪ್ಪಿದ್ದ ವಿದ್ಯಾರ್ಥಿನಿಯ ಪೋಷಕರನ್ನು ಸಂದರ್ಶನ ಮಾಡಲು ಪತ್ರಕರ್ತ ಅಕ್ಷಯ್ ಸಿಂಗ್ ಎಂಬುವವರು ಹೋಗಿದ್ದರು. ಆದರೆ ವರದಿ ವೇಳೆಯಲ್ಲಿ ಅವರು ಸಹ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.

ಹೀಗಾಗಿ ಪ್ರಕರಣ ಸಂಬಂಧ ದೇಶದಾದ್ಯಂತ ಹಲವು ಅನುಮಾನ ಹಾಗೂ ವ್ಯಾಪಕ ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ತನಿಖಾ ತಂಡವು ನಮ್ರತಾ ದಾಮೋರ್ ಅವರ ಸಾವು ಪ್ರಕರಣದ ತನಿಖೆಯನ್ನು ಪುನರಾರಂಭಿಸಲು ಹಿರಿಯ ಅಧಿಕಾರಿಗಳು ಉಜ್ಜಯಿನಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

SCROLL FOR NEXT